ಮಂಗಳೂರು, ಡಿ.4: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾದ ದ.ಕ.ಜಿಲ್ಲಾ ಘಟಕದ ವತಿಯಿಂದ ಗುರುವಾರ `ಜೈಲು ಭರೋ’ ಕಾರ್ಯಕ್ರಮ ನಡೆಯಿತು.
ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯವನ್ನು ರಾಜ್ಯ ಸರಕಾರ ಕೂಡಲೇ ತಡೆಗಟ್ಟಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ಪಂಚಾಯತ್ ಕಚೇರಿ ಬಳಿಯಿಂದ ಎ.ಬಿ.ಶೆಟ್ಟಿ ವೃತ್ತದ ವರೆಗೆ ಮೆರವಣಿಗೆಯಲ್ಲಿ ಸಾಗಿದ ಮಹಿಳಾ ಮೋರ್ಚಾ ಕಾರ್ಯಕರ್ತರು ಎ.ಬಿ.ಶೆಟ್ಟಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಮುಂದಾದ ಕಾರ್ಯಕರ್ತೆಯರನ್ನು ಬಂಧಿಸಿದ ಪೊಲೀಸರು ನಂತರ ಬಿಡುಗಡೆಗೊಳಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಪುತ್ತೂರಿನ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರು ಮಾತನಾಡಿ, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಕೊಲೆಯಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ತೀರ್ಥಹಳ್ಳಿಯ ನಂದಿತಾ ಕೊಲೆ ಪ್ರಕರಣ ಹಾಗೂ ಉಪ್ಪಿನಂಗಡಿಯ ಪುಷ್ಪಲತಾ ಕೊಲೆ ಪ್ರಕರಣ, ಈ ರೀತಿಯ ಹಲವಾರು ಮಹಿಳಾ ದೌರ್ಜನ್ಯಗಳು ನಡೆಯುತ್ತಿದ್ದರೂ ಸರಕಾರ ಈ ಬಗ್ಗೆ ಯಾವೂದೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಲ್ಲಿ ಮುಂದಾಗದೇ ಸುಮ್ಮನೇ ಕಾಲಹರಣ ಮಾಡುತ್ತಿದೆ. ಇದರಿಂದ ಮಹಿಳೆಯರು ಆತಂಕದಿಂದ ಬದುಕುವಂತಹ ವಾತಾವರಣ ಸೃಷ್ಟಿಯಾಗಿದೆ. ಮಹಿಳೆಯರಿಗೆ ರಕ್ಷಣೆ ನೀಡುವ ಜವಾಬ್ದಾರಿ ಹೊತ್ತ ಸರಕಾರ ನ್ಯಾಯ ನೀಡುವಲ್ಲಿ ವಿಫಲವಾಗಿದೆ ಎಂದು ಅಕ್ರೋಷ ವ್ಯಕ್ತಪಡಿಸಿದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಜಿ. ಕೆ. ಸುಲೋಚನಾ ಭಟ್ ಅವರು ಮಾತನಾಡಿ, ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸಲು ತ್ವರಿತ ನ್ಯಾಯಾಲಯಗಳನ್ನು ನಿರ್ಮಿಸುವ ಭರವಸೆಯನ್ನು ಈಡೇರಿಸುವಲ್ಲಿ ಸರಕಾರ ವಿಫಲವಾಗಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಸರಕಾರ ಮುಂದಾಗಲಿಲ್ಲ . ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿರುವ ಸರಕಾರದ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರೋಪಗಳ ಸುರಿಮಳೆಗೈದ ಅವರು ಗೃಹ ಖಾತೆಯನ್ನು ಸಮರ್ಥವಾಗಿ ನಿಭಾಯಿಸಲಾಗದ ಗೃಹ ಸಚಿವ ಕೆ. ಜೆ. ಜಾರ್ಜ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ದ. ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಮಾತನಾಡಿ, ರಾಜ್ಯದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿಫಲವಾಗಿರುವ ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಬಿಜೆಪಿ ಮುಖ್ಯ ಸಹ ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿ ಅವರು ಮಹಿಳೆಯರ ವಿರುದ್ಧದ ಅಪರಾಧ ಪರೀಕ್ಷಿಸಲು ಸಾಮರ್ಥ್ಯವನ್ನು ವೇಳೆ ಗೃಹ ಸಚಿವ ಕೆ.ಜೆ. ಜಾರ್ಜ್ ಕೆಳಗಿಳಿಯುವಂತೆ ಹೇಳಿದರು.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮಂಗಳೂರು ನಗರದ ಸುತ್ತಮುತ್ತಲಿನ ಹಾಗೂ ಪುತ್ತೂರು, ಸುಳ್ಯ, ಕೊಡಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮೋರ್ಚಾ ಕಾರ್ಯಕರ್ತರು ಆಗಮಿಸಿದ್ದರು.







