ಬೆಂಗಳೂರು,ಡಿ.04 : ಮದ್ಯದ ಅಮಲಿನಲ್ಲಿ ರಸ್ತೆ ಬದಿ ನಿಂತಿದ್ದ ಕಾರಿನ ಗಾಜು ಪುಡಿ-ಪುಡಿ ಮಾಡಿದ್ದ ಆರೋಪಿಗಳನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ಬಿಇಎಂಎಲ್ ಲೇಔಟ್ ನಿವಾಸಿ ಎಸ್.ಮಂಜುನಾಥ ಮತ್ತು ಬಸವೇಶ್ವರನಗರದ ನಿಶಾಂತ್ ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬಸವೇಶ್ವರನಗರದ ಠಾಣಾ ವ್ಯಾಪ್ತಿಯ ಕುರುಬರಹಳ್ಳಿ, ಆದರ್ಶ ಕಾಲೋನಿ, ಶಾರದಾ ಲೇಔಟ್ ಗಳಲ್ಲಿ ರಸ್ತೆ ಬದಿ ನಿಲುಗಡೆ ಮಾಡಿದ್ದ ವಾಹನಗಳ ಗಾಜು ಒಡೆದು ಹಾಕಿದ್ದ ಸಂಬಂಧ ಪ್ರಕರಣ ದಾಖಲಾಗಿತ್ತು
ರಾತ್ರಿ ಸುರಕ್ಷಿತವಾಗಿ ಪಾರ್ಕ್ ಮಾಡಿದ್ದ ಕಾರುಗಳ ಗಾಜು ಬೆಳಗ್ಗೆ ನೋಡಿದರೆ ಪುಡಿಪುಡಿಯಾಗಿರುತ್ತಿತ್ತು. ಇವರ ಕಾಟದಿಂದ ಬೇಸತ್ತ ನಾಗರಿಕರು ದೂರು ದಾಖಲಿಸಿದ್ದರು. ಅನೇಕ ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿಕೊಂಡು ಓಡಾಡಿಕೊಂಡಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು ಬಸವೇಶ್ವರ ನಗರ ಮತ್ತು ಸುತ್ತ ಮುತ್ತಲಿನ ಜನ ನಿಟ್ಟುಸಿರು ಬಿಡುವಂತಾಗಿದೆ.[ಹುಬ್ಬಳ್ಳಿ ಸಮೀಪ ನೇಣಿಗೆ ಶರಣಾದ ಶಿರಸಿ ಪ್ರೇಮಿಗಳು] ಕಾರ್ಯಾಚರಣೆಯಲ್ಲಿ ಬಸವೇಶ್ವರನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಪೂರ್ಣಚಂದ್ರ ತೇಜಸ್ವಿ, ಪಿಎಸ್‍ಐ ಶ್ರೀ ಸಿದ್ದಲಿಂಗಯ್ಯ, ಎಎಸ್‍ಐ ಬಾಲಕೃಷ್ಣ, ಹನುಮಂತರಾಜು, ಲೋಕೇಶ್, ರಾಜಶೇಖರಯ್ಯ ಭಾಗವಹಿಸಿದ್ದರು.
