ಕುಂದಾಪುರ : ಶುಕ್ರವಾರ ರಾತ್ರಿ ಗಂಗೊಳ್ಳಿಯ ಹೃದಯಭಾಗದಲ್ಲಿರುವ ಜಾಮೀಯಾ ಕಾಂಪ್ಲೆಕ್ಸ್ ಕಟ್ಟಡಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಭಂಧಿಸಿದಂತೆ ಗಂಗೊಳ್ಳಿಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಬುಧವಾರ ಸಂಜೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಯ ಬೆಂಬಲಿತರು ನೂರಾರು ಸಂಖ್ಯೆಯಲ್ಲಿ ಗಂಗೊಳ್ಳಿ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಈ ವೇಳೆ ಪೊಲೀಸರಿಂದ ತಮ್ಮ ಮೇಲೆಯೇ ಹಲ್ಲೆ ನಡೆದಿದೆ ಎಂದು ಆರೋಪಿಸಿಲಾಗಿದ್ದು ಇಂದು ಗಂಗೊಳ್ಳಿ ಬಂದ್‌ಗೆ ಕರೆಕೊಟ್ಟು ಪ್ರತಿಭಟನೆ ನಡೆಸಲಾಗುತ್ತದೆ ಎಂಬ ಮಾಹಿತಿಯಿದೆ.
ಘಟನೆಯ ವಿವರ: ಕಳೆದ ಶುಕ್ರವಾರ ಗಂಗೊಳ್ಳಿಯ ಜಾಮಿಯಾ ಕಾಂಪ್ಲೆಕ್ಸ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ಅಂಗಡಿ ಮಾಲೀಕರು ಹದಿಮೂರು ಜನರನ್ನು ಹೆಸರಿಸಿ ಗಂಗೊಳ್ಲಿ ಠಾಣೆಗೆ ದೂರು ನೀಡಿದ್ದರು. ಆದರೆ ಯಾರನ್ನೂ ಬಂದಿಸಿಲ್ಲ ಎಂದು ಆರೋಪಿಸಿ ಬುಧವಾರ ಬೆಳಿಗ್ಗೆ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದ್ದರು. ನಂತರದ ಬೆಳವಣಿಗೆಯಲ್ಲಿ ಗಂಗೊಳ್ಳಿಯ ಹಿಂದೂ ಜಾಗರಣಾ ವೇದಿಕೆ ಮುಖಂಡನೆನ್ನಿಸಿಕೊಂಡ ವಾಸು ದೇವಾಡಿಗ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಬೆಳಗ್ಗೆ ಮುಸ್ಲಿಮರ ಪ್ರತಿಭಟನೆ ಹಾಗೂ ನಂತರ ವಾಸು ದೇವಾಡಿಗನ ಬಂಧನದಿಂದ ಆಕ್ರೋಶಗೊಂಡ ಬೆಂಬಲಿಗರು ಗಂಗೊಳ್ಳಿ ಠಾಣೆಯಲ್ಲಿ ಸಂಜೆ ಸುಮಾರು ೫.೩೦ರಿಂದ ಜಮಾಯಿಸತೊಡಗಿದರು. ಸುಮಾರು ಒಂದು ಗಂಟೆಯಷ್ಟರೊಳಗೆ ಸೇರಿದ ನೂರಾರು ಜನ ವಾಸು ದೇವಾಡಿಗನನ್ನು ಬಿಡುವಂತೆ ಆಗ್ರಹಿಸಿದರು. ಈ ವೇಳೆ ಕರ್ತವ್ಯದಲ್ಲಿದ್ದ ಎಸಿಪಿ ಅಣ್ಣಾಮಲೈ ಎ ಅವರು ಕಾನೂನನ್ನು ಗೌರವಿಸುವಂತೆ ಮನವಿ ಮಾಡಿಕೊಂಡರು ಈ ವೇಳೆ ಬಿಜೆಪಿ ಬೈಂದೂರು ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಸದಾನಂದಗೆ ಹಲ್ಲೆ? : ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಮನಗಂಡ ಪೊಲೀಸರು ಮುಮದಿನ ಕ್ರಮಕ್ಕೆ ಯತ್ನಿಸುತ್ತಿದ್ದಂತೆ ಚದುರಿದ ಜನ ಸಮೀಪದ ಅಣ್ಣಪ್ಪಯ್ಯ ಸಭಾಭವನದಲ್ಲಿ ಸೇರಿ ಅಣ್ಣಾಮಲೈಗೆ ಧಿಕ್ಕಾಋ ಕೂಗಿದರು. ಇದೇ ಸಂದರ್ಭ ನೆರದವರನ್ನು ಉದ್ಧೇಶಿಸಿ ಮಾತನಾಡಿದ ಸದಾನಂದ ಶೇರೆಗಾರ್, ನಿರಪರಾಧಿಯೊಬ್ಬನನ್ನು ಪೊಲೀಸರು ಯಾವುದೋ ಒತ್ತಡಕ್ಕೆ ಮಣಿದು ಬಂಧಿಸಿದ್ದಾರೆ. ಇದು ತಪ್ಪೆಂದು ಹೇಳಿ ಆತನ ಬಿಡುಗಡೆ ಮಾಡುವಂತೆ ಕೇಳಿಕೊಂಡಾಗ ಎಸಿಪಿ ಹಲ್ಲೆ ನಡೆಸಿ ಇನ್ನೂ ಇಲ್ಲೆ ಇದ್ದರೆ ಶೂಟ್ ಮಾಡಿ ಬಿಸಾಡುವ ಬೆದರಿಕೆ ಹಾಕಿದ್ದಾರೆ. ತಪ್ಪು ಮಾಡದ ವ್ಯಕ್ತಿಯನ್ನು ಬಂಧಿಸುವ ಮೂಲಕ ಇಡೀ ಹಿಂದೂ ಸಮಾಜಕ್ಕೆ ಅನ್ಯಾಯವೆಸಗಲಾಗಿದೆ. ಈ ಬಗ್ಗೆ ಗುರುವಾರ ಗಂಗೊಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಆದರೆ ಈ ಬಗ್ಗೆ ಎಸಿಪಿ ಅಣ್ಣಾಮಲೈ ಅವರನ್ನು ಪ್ರಶ್ನಿಸಿದಾಗ ಅಂತಹಾ ಯಾವುದೇ ಘಟನೆ ಸಂಭವಿಸಿಲ್ಲ. ಕಾನೂನಿಗೆ ಪೊಲೀಸರೂ ಒಂದೇ ನಾಗರೀಕರು ಒಂದೇ ಎಲ್ಲರೂ ತಲೆ ಬಾಗಲೇಬೇಕು. ನ್ಯಾಯಯುತವಾಗಿ ತನಿಖೆ ಆರಂಭಿಸಿದ್ದೇವೆ. ಐಜಿಪಿಯವರ ಆದೇಶದಂತೆ ನಾನು ಇಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಶಾಂತಿ ಕಾಪಾಡುವುದಷ್ಟೇ ನನ್ನ ಕೆಲಸ. ಯಾವುದೇ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿಲ್ಲ ಎಂದಿದ್ದಾರೆ.
ನಾಳಿನ ಪ್ರತಿಭಟನೆ ಬಗ್ಗೆ ಕೇಳಿದಾಗ, ಪ್ರತಿಭಟಿಸುವ ನಾಗರೀಕರ ಹಕ್ಕು. ಆದರೆ ಅದು ಶಾಂತಿಯುತವಾಗಿರಬೇಕು. ಯಾವುದೇ ಸೊತ್ತುಗಳಿಗೆ ಹಾನಿಯುಂಟಾದರೆ ಅಂತಹವರ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಘಟನಾ ಸ್ಥಳಕ್ಕೆ ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ ಶೆಟ್ಟಿ ಆಗಮಿಸಿ ಕಾರ್ಯಕರ್ತರನ್ನು ಸಮಾಧಾನಿಸಿದರು. ನಂತರ ಪೊಲೀಸ್ ಠಾಣೆಗೆ ಬಂದು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ರಾಜಕೀಯ ಮಾಡಲ್ಲ. ತಪ್ಪಿತಸ್ಥರಿಗೆ ಪ್ರಾಮಾಣಿಕ ತನಿಖೆ ನಡೆಸಿ ಶಿಕ್ಷೆಯಾಗಬೇಕು. ಆದರೆ ನಿರಪರಾಧಿಗಳನ್ನು ಬಂಧಿಸಿ ಅವಮಾನಿಸುವುದಾಗಲೀ, ಶಿಕ್ಷೆ ನೀಡುವುದಾಗಲೀ ಸರಿಯಲ್ಲ ಎಂದಿದ್ದಾರೆ.