ಕನ್ನಡ ವಾರ್ತೆಗಳು

ಪರಿವರ್ತನಾ ದಿನಾಚರಣೆ ಹಿನ್ನೆಲೆ : ಮೂಢನಂಬಿಕೆ ವಿರುದ್ಧದ ಜನಜಾಗೃತಿ ಜಾಥಾಕ್ಕೆ ಮಂಗಳೂರಿನಲ್ಲಿ ಚಾಲನೆ

Pinterest LinkedIn Tumblr

Jatha_prog_photo_1

ಮಂಗಳೂರು, ಡಿ.2: ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಮಾನವ ಬಂಧುತ್ವ ವೇದಿಕೆಯ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಬೆಳಗಾವಿಯಲ್ಲಿ ಡಿ.6ರಂದು ನಡೆಯಲಿರುವ ಪರಿವರ್ತನಾ ದಿನಾಚರಣೆ ಹಿನ್ನೆಲೆಯಲ್ಲಿ ನಡೆಯುವ ಮೂಢನಂಬಿಕೆ ವಿರುದ್ಧ ಜನಜಾಗೃತಿ ಜಾಥಾಕ್ಕೆ ಮಂಗಳೂರಿನಲ್ಲಿ ಸೋಮವಾರ ಚಾಲನೆ ದೊರೆಯಿತು.

ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿಚಾರವಾದಿ ನರೇಂದ್ರ ನಾಯಕ್ ತಮಟೆ ಬಾರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮೂಢನಂಬಿಕೆಯನ್ನು ಹೋಗಲಾಡಿಸುವುದು ಸಮಾಜದ ಪ್ರತಿಯೊಬ್ಬನ ಕರ್ತವ್ಯವಾಗಿದೆ. ಈ ಜಾಥಾವು ಸಣ್ಣ ಹೆಜ್ಜೆಯಾಗಿದೆ. ಇಂತಹ ಸಣ್ಣ ಸಣ್ಣ ಹೆಜ್ಜೆಗಳು ಗುಡ್ಡದಷ್ಟು ಅಗಾಧವಾಗಿರುವ ಕಂದಾಚಾರಗಳನ್ನು ತಳಮಟ್ಟದಿಂದ ಅಳಿಸಲು ಸ್ಫೂರ್ತಿಯಾಗಲಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾರ್ಪೊರೇಟರ್ ಪುರುಷೋತ್ತಮ ಚಿತ್ರಾಪುರ, ಮೂಢನಂಬಿಕೆಗಳ ವಿರುದ್ಧ ವೈಜ್ಞಾನಿಕ ಮನೋಭಾವ ಬೆಳೆಸುವ ಕೆಲಸ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಸುರತ್ಕಲ್, ಹಳೆಯಂಗಡಿ, ಮುಲ್ಕಿ, ಹೆಜಮಾಡಿ, ಕಾಪು, ಕುಂದಾಪುರ, ಹೊನ್ನಾವರ, ಕಾರವಾರ ಮೂಲಕ ಸುಮಾರು 500 ಕಿ.ಮೀ. ಕ್ರಮಿಸಿಕೊಂಡು ಬೆಳಗಾವಿ ತಲುಪಲಿದೆ. ಪ್ರತಿ ಕೇಂದ್ರಗಳಲ್ಲೂ ಮಾನವ ಸಂಬಂಧ ಬೆಳೆಸುವ ಹಾಡುಗಳನ್ನು ಹಾಡಲಾಗುತ್ತದೆ. ಮಂಗಳೂರು ಅಲ್ಲದೆ ಮೈಸೂರು, ಕೋಲಾರ, ಬೀದರ್‌ನಿಂದಲೂ ಜಾಥಾ ಹೊರಡಲಿದೆ ಎಂದು ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಸುದಾನಂದ ತಿಳಿಸಿದ್ದಾರೆ.

ಈ ಸಂದರ್ಭ ಮಹಾಲಿಂಗಯ್ಯ ಚಿತ್ರದುರ್ಗ, ಆಶಾ ಕಾರ್ಕಳ, ವಿಜಯ ಕಾರ್ಕಳ, ಕೃಷ್ಣಯ್ಯ ಬೆಳ್ತಂಗಡಿ ಹಾಜರಿದ್ದರು.

Write A Comment