ಕುಂದಾಪುರ: ಅಂಗ್ಲ ಮಾಧ್ಯಮವೆಂದ ಕೂಡಲೇ ಕನ್ನಡ ವಿರೋಧಿ ಭಾವನೆ ಬೆಳೆಯುವುದು, ಕನ್ನಡ ಓದು, ಅಧ್ಯಯನ, ಬರವಣಿಗೆಗಳನ್ನು ನಿಲ್ಲಿಸುವುದು ಅಪರಾಧವೆಂದು ಪರಿಗಣಿಸಬೇಕು. ಕನ್ನಡ ಮಾತನಾಡಿದರೆ ದಂಡ ವಿಧಿಸುವ ಅಂಗ್ಲಮಾಧ್ಯಮದ ಪ್ರವೃತ್ತಿ ಶಿಕ್ಷಾರ್ಹವಾದುದು. ಅಂತಹ ಸಂಸ್ಥೆಗಳ ಮೇಲೆ ಆಕಸ್ಮಿಕ ಭೇಟಿನೀಡಿ ಖಂಡಿಸಿ ದಂಡ ವಿಧಿಸಬೇಕು. ಅವರು ಕನ್ನಡ ಸಮಾಧಿಯ ಮೇಲೆ ಇಂಗ್ಲೀಷಿನ ಗೋರಿ ಕಟ್ಟುತ್ತಿದ್ದಾರೆ. ಹೀಗೆಂದು ಸಾಹಿತಿ ಡಾ.ಕನರಾಡಿ ವಾದಿರಾಜ ಭಟ್. ಕೊಲ್ಲೂರಿನ ಶ್ರೀ ಮೂಕಾಂಬಿಕಾ ಸಭಾಗಣದಲ್ಲಿ ನಡೆದ 14ನೇ ಕುಂದಾಪುರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಏಕೀಕರಣದ ಕಾಲದಲ್ಲಿ ಇಂಗ್ಲೀಷ್ ಶಬ್ದಗಳು ಮಾತಿನ ಮಧ್ಯ ಬಂದರೆ ಸ್ವಯಂ ಇಚ್ಛೆಯಿಂದ ದಂಡ ತೆರುವ ಕ್ರಮವಿತ್ತು. ಆದರೆ ಎಳೆಯ ಮಕ್ಕಳ ಬಾಯಿಕಟ್ಟಿ ಸಹಜವಾಗಿ ಕನ್ನಡ ನುಡಿ ಬಂದರೆ ದಂಡ ತೆರುವುದು ಎಂತಹ ವಿಪರ್ಯಾಸ ಎಂದು ಖೇದ ವ್ಯಕ್ತಪಡಿಸಿದರು. ಇಂದು ಆಂಗ್ಲಮಾಧ್ಯಮದ ’ಅತಿ’ಯನ್ನು ಸರಿದೂಗಿಸಲು ಕನ್ನಡಾಭಿಮಾನದ ’ಅತಿ’ ಬೇಕೇಬೇಕು ಎಂದು ಪ್ರತಿಪಾದಿಸಿದ ಅವರು ಆಯುರ್ವೇದ ಚಿಕಿತ್ಸೆಯಲ್ಲಿ ಶೀತವನ್ನು ಶೀತದಿಂದ, ಉಷ್ಣವನ್ನು ಉಷ್ಣದಿಂದ ಶಮನಗೊಳಿಸುವ ಚಿಕಿತ್ಸಾ ವಿಧಾನ ನಮ್ಮದಾಗಬೇಕಿದೆ ಎಂದರು.
ನಮ್ಮ ಹಿಂದಿನ ಸಮಾಜದಲ್ಲಿ ಜನಸಾಮಾನ್ಯರಲ್ಲಿದ್ದ ಆಧ್ಯಾತ್ಮಿಕ ಪ್ರಜ್ಞೆಯ ಮೌಲ್ಯಾಧಾರಿತ ಸಾಹಿತ್ಯ ಸೃಷ್ಠಿಮಾಡಿದೆ. ಮುಂದೆಯೂ ಸಾಹಿತ್ಯವು ಮೌಲ್ಯಭರಿತವಾಗಲು ಆಧ್ಯಾತ್ಮಿಕ ಜ್ಞಾನ, ಅಭ್ಯಾಸ, ಸಂಸ್ಕಾರ, ಮೌಲ್ಯಗಳು ಬರಹಗಾರರಲ್ಲಿ ಸಮ್ಮಿಳಿತವಾಗಿರಬೇಕು. ಯಂತ್ರ, ತಂತ್ರ, ವಿಜ್ಞಾನದ ಈ ಸಮಯದಲ್ಲಿ ಪೊಳ್ಳು ವೈಚಾರಿಕತೆ, ಆಧ್ಯಾತ್ಮ ವಿರೋಧಿ ಮನೋಧರ್ಮವೇ ಸರಿಯೆನಿಸಬಹುದು. ಆದರೆ ಟೊಳ್ಳುತನವನ್ನರಿತು ಗಟ್ಟಿ ವಿಚಾರ-ಮೌಲ್ಯಗಳನ್ನು ತಮ್ಮದಾಗಿಸಿಕೊಳ್ಳಬೇಕು. ಜನಪದ ಮತ್ತು ಶಿಷ್ಟಮಹಾಕಾವ್ಯಗಳ ತಿರುಳು ಆಧ್ಯಾತ್ಮಿಕ ಬದುಕಿನ ದರ್ಶನ. ಇಂತಹ ಸಾಹಿತ್ಯವನ್ನು ಇಂದಿನ ಸಾಹಿತಿಗಳು ನಿಷ್ಟೆಯಿಂದ ಅಧ್ಯಯನ ಮಾಡಿ ಗಟ್ಟಿ ಸಾಹಿತ್ಯ ಹಾಗೂ ಶ್ರೇಷ್ಠ ಸಾಹಿತ್ಯ ಸೃಷ್ಠಿ ಮಾಡುವಂತಾಗಲಿ ಎಂದು ಹಾರೈಸಿದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಕ ಕೆ. ಕರುಣಾಕರ ಶೆಟ್ಟಿ ಸಮ್ಮೇಳನ ಉದ್ಘಾಟಿಸಿದರು. ತಾಲೂಕು ಕಸಾಪ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ ಪರಿಷತ್ ಧ್ವಜಾರೋಹಣ ಗೈದರು. ಕನ್ನಡ ಸಾಹಿತ್ಯ ಪರಿಷತ್ತು ನೂರನೇ ವರ್ಷಾಚರಣೆ ಸಂಭ್ರಮ ಹೊಸ್ತಿಲಲ್ಲಿರುವುದರಿಂದ ವಿಶೇಷವಾಗಿ ಶ್ರೀಮೂಕಾಂಬಿಕಾ ದೇವಳದ ಪ್ರೌಢಶಾಲೆಯ ೧೦೦ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ನಿವೃತ್ತ ಉಪನ್ಯಾಸಕ ಎಸ್.ಜನಾರ್ದನ ಮರವಂತೆ ಪುಸ್ತಕ ಮಳಿಗೆ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ ಭಟ್ ಅಪೂರ್ವ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಭಾಷಣ ಮಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕೆ.ಕೆ.ಕಾಳಾವರ್‌ಕರ್, ಲೇಖಕರಾದ ಶ್ರೀನಿವಾಸ ಅಡಿಗ, ಜಗದೀಶ್ ದೇವಾಡಿಗ, ಮೊಗೇರಿ ಶೇಖರ ದೇವಾಡಿಗ, ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಕೊಲ್ಲೂರು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ಐತಾಳ ಸಾಹಿತ್ಯ ಶೋಭಾಯಾತ್ರೆಗೆ ಚಾಲನೆ ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಶೆರುಗಾರ್ ವಂದಿಸಿದರು. ವಕೀಲ ರಾಘವೇಂದ್ರಚರಣ ನಾವಡ ಕಾರ್ಯಕ್ರಮ ನಿರೂಪಿಸಿದರು.