ಮಂಗಳೂರು, ನ.27: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವ ದಲ್ಲಿ ಶ್ರವಣ ದೋಷ ಮುಕ್ತ ಕರ್ನಾಟಕ ಯೋಜನೆಗೆ ಮುಂದಾಗಿದ್ದು, ಇದರ ಪೈಲಟ್ ಯೋಜನೆಗೆ ದಕ್ಷಿಣ ಕನ್ನಡದಲ್ಲಿ ಡಿ.7ರಂದು ಚಾಲನೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಸರ್ಕ್ಯೂಟ್‌ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.
50 ಮಂದಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ : ನಾಟೆಕಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ವಿನೂತನ ಯೋಜನೆ ದೇಶದಲ್ಲೇ ಪ್ರಥಮ ಹಾಗೂ ಉಚಿತವಾಗಿ ನಡೆಯಲಿದೆ. ಶ್ರವಣ ದೋಷ ಸಮಸ್ಯೆಗಳು ಹಲವಾರು ರೀತಿಯಲ್ಲಿದ್ದು, ಕೆಲವು ಸಮಸ್ಯೆಗಳನ್ನು ಕೃತಕ ಶ್ರವಣ ಸಾಧನಗಳ ಮೂಲಕ ನಿವಾರಿಸಬಹುದಾಗಿದೆ. ಆದರೆ ಕೃತಕ ಸಾಧನಗಳಿಂದಲೂ ಶ್ರವಣ ದೋಷ ಸಾಧ್ಯವಾಗದ ಸಂದರ್ಭ ‘ಕಾಕ್ಲಿಯರ್ ಇಂಪ್ಲಾಂಟ್’ ಎಂಬ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ. ಇದು ದುಬಾರಿಯಾಗಿದ್ದು, ಹಿಂದೆ ಈ ಶಸ್ತ್ರ ಚಿಕಿತ್ಸೆಗೆ ಸುಮಾರು 12 ಲಕ್ಷ ರೂ. ವೆಚ್ಚವಾಗುತ್ತಿದ್ದರೆ, ಇದೀಗ ಅದು 6ರಿಂದ 7 ಲಕ್ಷ ರೂ.ವರೆಗೆ ತಗಲು ತ್ತದೆ.
ಈ ಚಿಕಿತ್ಸೆಗಾಗಿ ಈಗಾಗಲೇ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಲಕ್ಷ ರೂ.ನಿಂದ 2 ಲಕ್ಷ ರೂ.ವರೆಗೆ ನೆರವು ನೀಡಲಾಗುತ್ತಿದೆ. ಹಾಗಿದ್ದರೂ ಉಳಿದ ನಾಲ್ಕೈದು ಲಕ್ಷ ರೂ.ಗಳನ್ನು ಭರಿಸುವುದು ಬಡ ಕುಟುಂಬಗಳಿಗೆ ಕಷ್ಟಸಾಧ್ಯವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಇಂತಹ ಶ್ರವಣ ದೋಷವಿರುವ, ಕಾಕ್ಲಿಯಾರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ಅಗತ್ಯವಿರುವ 50 ಮಂದಿ ಅರ್ಹ ರೋಗಿಗಳ ಆಯ್ಕೆಯನ್ನು ಈ ಪೈಲಟ್ ಯೋಜನೆಯ ಮೂಲಕ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಿದೆ. ಈ ಶಸ್ತ್ರಚಿಕಿತ್ಸೆಯ ಯಶಸ್ಸಿನ ಆಧಾರದಲ್ಲಿ ಮುಂದೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಈ ಯೋಜನೆಯನ್ನು ವಿಸ್ತರಿಸುವ ಆಲೋಚನೆ ಮಾಡಲಾಗಿದೆ. 5 ವರ್ಷ ದೊಳಗಿನ ಮಕ್ಕಳಲ್ಲಿನ ಇಂತಹ ಸಮಸ್ಯೆಗೆ ಪ್ರಮುಖ ಆದ್ಯತೆ ನೀಡಲಾಗುವುದು ಎಂದು ಸಚಿವ ಖಾದರ್ ವಿವರಿಸಿದರು.
ಡಿ.7ರಂದು ನಾಟೆಕಲ್‌ನ ಪ್ರಾಥ ಮಿಕ ಆರೋಗ್ಯ ಕೇಂದ್ರದ ಆವರಣ ದಲ್ಲಿ ನಡೆಯುವ ಶ್ರವಣ ದೋಷ ಉಚಿತ ತಪಾಸಣಾ ಶಿಬಿರದಲ್ಲಿ ಶ್ರವಣ ದೋಷವಿರುವವರು ಭಾಗವಹಿಸಬ ಹುದು ಎಂದವರು ಹೇಳಿದರು. ಶಿಬಿರದಲ್ಲಿ ಹೊಸದಿಲ್ಲಿಯ ಖ್ಯಾತ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸಾ ತಜ್ಞ ಡಾ.ಹಾನ್ಸ್ ಹಾಗೂ ಬೆಂಗಳೂರಿನ ತಜ್ಞ ವೈದ್ಯೆ ಡಾ.ವಸಂತಿ ಭಾಗವಹಿಸಲಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಲಯನ್ಸ್ ಕ್ಲಬ್, ಹೊಸದಿಲ್ಲಿಯ ಸಂಸ್ಥೆ ಹಾಗೂ ಯೆನೆಪೊಯ ಸಂಸ್ಥೆಗಳ ಸಹಭಾಗಿತ್ವ ದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದವರು ತಿಳಿಸಿದರು.
ಯೆನೆಪೊಯ ಆಸ್ಪತ್ರೆಯ ಸಹ ಭಾಗಿತ್ವದಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯ ವಿರುವ ರೋಗಿಗಳ ಸಿಟಿ ಸ್ಕಾನ್ ಹಾಗೂ ಎಂಆರ್‌ಐ ಉಚಿತವಾಗಿ ನಡೆಸಲಾಗುವುದು. ಬಳಿಕ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಬೆಂಗಳೂರಿನ ಇಂದಿರಾ ಗಾಂಧಿ ಚೈಲ್ಡ್ ಇನ್‌ಸ್ಟಿಟ್ಯೂಟ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ಶ್ರವಣ ಸಾಧನದ ಅಗತ್ಯವಿರುವ 50 ರೋಗಿಗಳಿಗೆ ಶಿಬಿರ ದಲ್ಲಿ ಶ್ರವಣ ಸಾಧನ ವಿತರಿಸುವ ಕಾರ್ಯಕ್ರಮವೂ ನಡೆಯಲಿದೆ ಎಂದು ಸಚಿವ ಖಾದರ್ ವಿವರಿಸಿದರು.