ಕನ್ನಡ ವಾರ್ತೆಗಳು

ಕಂಬಳ ನಿಷೇಧ ವಿರುದ್ಧ ನ.19ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

Pinterest LinkedIn Tumblr

kambala_udupi_photo_1

ಉಡುಪಿ/ಪುತ್ತೂರು/ಬೆಳ್ತಂಗಡಿ :  ಕಂಬಳ ನಿಷೇಧ ವಿರುದ್ಧ ಕರಾವಳಿಯಲ್ಲಿ ಆಕ್ರೋಶ ಹೆಚ್ಚುತ್ತಿದ್ದು, ನ.19ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಇದರಲ್ಲಿ 200 ಜತೆ ಓಟದ ಕೋಣಗಳ ಮೆರವಣಿಗೆ ನಡೆಯಲಿದೆ.

ಉಡುಪಿ, ಪುತ್ತೂರು ಮತ್ತು ಬೆಳ್ತಂಗಡಿಗಳಲ್ಲಿ ಬುಧವಾರ ಕಂಬಳ ಸಮಿತಿಯ ನಾನಾ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿ, ಕಂಬಳ ಸಮಿತಿ ಅಧ್ಯಕ್ಷ ಭಾಸ್ಕರ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಎರಡು ಜಿಲ್ಲೆಗಳ ಸಾಂಪ್ರದಾಯಿಕ ಮತ್ತು ಜೋಡುಕರೆ ಕಂಬಳಗಳಲ್ಲದೆ ನಾನಾ ಸಂಘ ಸಂಸ್ಥೆಗಳು ಕೈಜೋಡಿಸಲಿವೆ. 25000 ಮಂದಿ ಕಂಬಳಾಭಿಮಾನಿಗಳು ಭಾಗವಹಿಸಲಿದ್ದಾರೆ ಎಂದರು. ಕಂಬಳ ಕೋಣಗಳು ನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಾಜರಾಗಲಿವೆ.

ಶಾಸನಗಳಲ್ಲಿ ಉಲ್ಲೇಖಿತ ಕಂಬಳ: ಉಡುಪಿಯಲ್ಲಿ ಮಾತನಾಡಿದ ಐಕಳ ಕಂಬಳ ಸಮಿತಿ ವ್ಯವಸ್ಥಾಪಕ ದೇವಿಪ್ರಸಾದ್ ಶೆಟ್ಟಿ, ಬಾರ್ಕೂರು ಕಂಬಳ ಸಮಿತಿ ವ್ಯವಸ್ಥಾಪಕ ಶಾಂತಾರಾಮ ಶೆಟ್ಟಿ , ಬಾರ್ಕೂರು ಅರಸರ ಕಾಲದಲ್ಲಿ, ಜೈನರಸರ ಕಾಲದಲ್ಲಿ, ಟಿಪ್ಪುಸುಲ್ತಾನ್, ಮೈಸೂರು ಅರಸರು, ಇಂಗ್ಲಿಷರ ಕಾಲದಲ್ಲಿ ಕಂಬಳ ನಡೆದಿರುವ ಉಲ್ಲೇಖಗಳಿವೆ. ಶೃಂಗೇರಿ ಶಾಸನದಲ್ಲಿ ಐಕಳ ತಾಳೆಗರಿಯಲ್ಲಿ, ಕರ್ಜೆ ಶಾಸನದಲ್ಲಿ ಕೂಡಾ ಕಂಬಳದ ಬಗ್ಗೆ ಉಲ್ಲೇಖಗಳಿವೆ. ಇಂಥ ಇತಿಹಾಸ ಇರುವ ಕಂಬಳವನ್ನು ನಿಷೇಧಿಸುವಂತೆ ಸು.ಕೋರ್ಟ್ ಎಲ್ಲೂ ಹೇಳಿಲ್ಲ. ಜಲ್ಲಿಕಟ್ಟು ನಿಷೇಧಿಸಿರುವುದನ್ನೇ ನಮ್ಮ ಅಧಿಕಾರಿಗಳು ತಪ್ಪಾಗಿ ಅರ್ಥ ಮಾಡಿಕೊಂಡು ಕಂಬಳ ನಿಷೇಧಿಸಿದ್ದಾರೆ ಎಂದು ಹೇಳಿದರು. ಕಂಬಳದ ವಿಶೇಷತೆಯನ್ನು ನ್ಯಾಯಾಲಯಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮನದಟ್ಟು ಮಾಡಬೇಕು ಎಂದು ಒತ್ತಾಯಿಸಿದರು. ನಾನಾ ಕಂಬಳ ಸಮಿತಿಗಳ ವ್ಯವಸ್ಥಾಪಕರಾದ ವಿನಯ ಬಲ್ಲಾಳ್, ಚಿತ್ತರಂಜನದಾಸ್ ಭಂಡಾರಿ, ಭುಜಂಗ ಶೆಟ್ಟಿ, ಸುಭಾಶ್ ಬಲ್ಲಾಳ್ ಉಪಸ್ಥಿತರಿದ್ದರು.

ಅಧಿಕಾರಿಯ ಆತುರ: ಪುತ್ತೂರಿನಲ್ಲಿ ಕೋಟಿಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಮಾತನಾಡಿ, ರಾಜ್ಯದ ಪಶುಸಂಗೋಪನೆ ಇಲಾಖೆ ವರಿಷ್ಠ ಅಧಿಕಾರಿಯೊಬ್ಬರು ಆತುರ ಆತುರವಾಗಿ ಕಂಬಳ ನಿಷೇಧಕ್ಕೆ ಉತ್ಸುಕತೆ ತೋರಿ ಅದನ್ನು ಬ್ಯಾನ್ ಮಾಡಹೊರಟಿದ್ದಾರೆ ಎಂದು ಅವರು ಆರೋಪಿಸಿದರು. ಕಂಬಳ ಸಮಿತಿಯ ಸುಧಾಕರ ಶೆಟ್ಟಿ, ಪುರಸಭಾಧ್ಯಕ್ಷ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ, ರೈತಸಂಘದ ಶ್ರೀಧರ ರೈ,ನಿರಂಜನ ರೈ ಉಪಸ್ಥಿತರಿದ್ದರು.

ಕೊಲ್ಲಿ ಕಂಬಳ ಇಲ್ಲ: ಬೆಳ್ತಂಗಡಿಯಲ್ಲಿ ಬಂಗಾಡಿಯ ಸೂರ್ಯಚಂದ್ರ ಕಂಬಳ ಸಮಿತಿ ಗೌರವಾಧ್ಯಕ್ಷ ರಂಜನ್ ಜಿ. ಗೌಡ ಮಾತನಾಡಿ, ಡಿ.30ರಂದು ನಡೆಯುವ ಕೊಲ್ಲಿ ಕಂಬಳ ಈ ಬಾರಿ ಇರುವುದರಿಲ್ಲ ಎಂದರು. ಕಂಬಳ ನಿಷೇಧದ ನಿರ್ಧಾರದ ವಿರುದ್ಧ ಈಗಾಗಲೇ ಜಿಲ್ಲಾ ಕಂಬಳ ಸಮಿತಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದಿಂದ ಅನುಮತಿ ದೊರೆತರೆ ಮತ್ತೆ ದಿನಾಂಕ ನಿಗದಿಪಡಿಸಿ ಕಂಬಳ ನಡೆಸಲಾಗುವುದು ಎಂದರು.

ಕಂಬಳ ಸಮಿತಿ ಅಧ್ಯಕ್ಷ ಡಾ. ಎಂ.ಎಂ. ದಯಾಕರ್, ಕಾರ್ಯದರ್ಶಿ ಪ್ರಭಾಕರ ಗೌಡ ಪೊಸಂದೋಡಿ, ಕೋಶಾಧಿಕಾರಿ ಭರತ್ ಕುಮಾರ್ ಇಂದಬೆಟ್ಟು, ಉಪಾಧ್ಯಕ್ಷ ತುಂಗಪ್ಪ ಪೂಜಾರಿ, ಸೀತಾರಾಮ ಉಪಸ್ಥಿತರಿದ್ದರು.

ಚೋರಾಡಿ ಕಂಬಳ ಕ್ರೀಡಾ ಉತ್ಸವ: ನ.29ರಂದು ನಡೆಯಬೇಕಾಗಿದ್ದ ಕುಂದಾಪುರದ ಚೋರಾಡಿ ತೀರ್ಥವಿನಾಯಕ ದೇವರ ಕಂಬಳ ಮಹೋತ್ಸವವನ್ನು ಕ್ರೀಡೋತ್ಸವವಾಗಿ ಆಚರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಬೆಳಗ್ಗೆ 10 ಗಂಟೆಗೆ ವಾಲಿಬಾಲ್ ಪಂದ್ಯಾಟ, ಅಪರಾಹ್ನ 1.30 ಗಂಟೆಗೆ ಹಗ್ಗಜಗ್ಗಾಟ ಹಾಗೂ ಯುವಕರಿಗೆ ಕೆಸರುಗದ್ದೆ ಓಟ ಸ್ಪರ್ಧೆ ಕಂಬಳಗದ್ದೆಯಲ್ಲಿ ನಡೆಯಲಿದೆ.

Write A Comment