ಮಂಗಳೂರು, ನ.27: ಧರ್ಮ, ಜಾತಿಯ ಹೆಸರಿನಲ್ಲಿ ನಡೆಯುವ ವೌಢ್ಯದ ಆಚರಣೆಯನ್ನು ನಿವಾರಿಸಿ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕೆನ್ನುವುದು ಸಂವಿಧಾನದ ಆಶಯವಾಗಿದೆ. ಇಂತಹ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಒಂದು ಜಾತಿಯ ಜನರು ಉಂಡ ಎಂಜಲೆಲೆಯ ಮೇಲೆ ಇನ್ನೊಂದು ಜಾತಿಯ ಜನರು ಹೊರಳಾಡುವ ಅನಿಷ್ಟ ಪದ್ಧತಿ ಒಂದು ಕಪ್ಪು ಚುಕ್ಕೆ. ಇದು ಕೊನೆಯಾಗಬೇಕಾಗಿದೆ ರಾಜ್ಯ ಸರಕಾರದ ಅಡ್ವೊ ಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಹೇಳಿದ್ದಾರೆ.
ಅವರು ಇಂದು ಮಂಗಳೂರು ವಕೀಲರ ಸಂಘದ ವತಿಯಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹಮ್ಮಿ ಕೊಂಡ ಕಾನೂನು ದಿನಾಚರಣೆಯ ಮುಖ್ಯ ಅತಿಥಿ ಯಾಗಿ ಮಾತನಾಡಿದರು. ಸತಿ ಪದ್ಧತಿ, ಅಸ್ಪಶತೆ ಮೊದಲಾದ ಪದ್ಧತಿಗಳನ್ನು ಕಾನೂನಿನ ಮೂಲಕ ನಿಯಂತ್ರಿಸಿದಂತೆ ಜಾತಿ ತಾರತಮ್ಯಕ್ಕೆ ಎಡೆಮಾಡಿಕೊಡುವ ಮಡೆಸ್ನಾನವನ್ನು ನಿಲ್ಲಿಸಲು ಯುವ ವಕೀಲರು ಸವಾಲಾಗಿ ಸ್ವೀಕರಿಸಿ ಸಂವಿಧಾನದ ಮಾರ್ಗದಲ್ಲಿ ಕಾನೂನು ಹೋರಾಟ ನಡೆಸಬೇಕೆಂದು ರವಿವರ್ಮ ಕುಮಾರ್ ಕರೆ ನೀಡಿದರು.
ಭಾರತದ ಸಂವಿಧಾನ ಧರ್ಮ ನಿರಪೇಕ್ಷಿತವಾಗಿದ್ದರೂ ಶ್ರೇಣೀಕೃತ ಸಮಾಜದಲ್ಲಿ ಜಾತಿಪದ್ಧತಿಯಿಂದ ಶೋಷಣೆ ಗೊಳಗಾದವರಿಗೆ ರಕ್ಷಣೆಯನ್ನು ನೀಡಿದೆ. ಅವರಿಗೂ ಸಮಾನವಕಾಶವನ್ನು ನೀಡಿರುವುದು ಮಾತ್ರವಲ್ಲ ಅಂತಹ ವ್ಯಕ್ತಿಗಳು ದೇಶದ ರಾಷ್ಟ್ರಪತಿಯಾಗುವ ಅವಕಾಶವನ್ನು ನೀಡಿರುವುದು ಭಾರತದ ಸಂವಿಧಾನದ ಹಿರಿಮೆಯನ್ನು ತೋರಿಸುತ್ತದೆ ಎಂದವರು ಹೇಳಿದರು. ಕುದ್ರೋಳಿಯಲ್ಲಿ ದಲಿತ ವಿಧವೆ ಅರ್ಚಕಿಯರ ನೇಮಕ ರಾಷ್ಟ್ರಕ್ಕೆ ಮಾದರಿ
ಕುದ್ರೋಳಿಯಲ್ಲಿ ದಲಿತ ವಿಧವೆಯರನ್ನು ಅರ್ಚಕರನ್ನಾಗಿ ಮಾಡಿರುವುದು ರಾಷ್ಟ್ರದಲ್ಲಿಯೇ ಮಾದರಿಯಾಗಿದೆ. ಇಂತಹ ಕ್ರಾಂತಿಕಾರಿ ನಡೆಗಳು ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುತ್ತದೆ ಎಂದು ರವಿವರ್ಮ ಕುಮಾರ್ ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧಕರಾದ ವಕೀಲರ ಸಂಘದ ಸದಸ್ಯರಾದ ನ್ಯಾಯವಾದಿ ಕೆ.ವಿವೇಕಾ ನಂದ ಫಣಿಯಾಲ, ಎಲ್.ಕುಮಾರ್, ಬಿ.ಎ.ಮುಹಮ್ಮದ್ ಹನೀಫ್, ನಿಕೇಶ್ ಶೆಟ್ಟಿ, ರಾಧಾರಾವ್, ಉದಯ ಪ್ರಕಾಶ್ ಮುಳಿಯರನ್ನು ಸನ್ಮಾನಿಸಲಾಯಿತು.ಜಿಲ್ಲಾ ಸತ್ರ ನ್ಯಾಯಾಧೀಶೆ ಎಂ.ಜಿ.ಉಮಾ, ರಾಜ್ಯ ವಕೀ ಲರ ಸಂಘದ ಅಧ್ಯಕ್ಷ ಪಿ.ಪಿ. ಹೆಗ್ಡೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ್ ಬಿ., ನ್ಯಾಯವಾದಿ ರವೀಂದ್ರನಾಥ ರೈ ಮತ್ತಿತರರು ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ಎಸ್. ಪಿ. ಚಂಗಪ್ಪ ಸ್ವಾಗತಿಸಿ, ಮನುಶರ್ಮ, ಅಕ್ಷತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.






