ಕನ್ನಡ ವಾರ್ತೆಗಳು

ಕೇಂದ್ರ ಸರಕಾರದ ನೀತಿಯ ವಿರುದ್ಧ ರೈತ ಕಾರ್ಮಿಕರಿಂದ ಪ್ರತಿಭಟನೆ.

Pinterest LinkedIn Tumblr

cpim_protest_govt_1

ಮಂಗಳೂರು,ನ.26:  ದೇಶದಾದ್ಯಂತ ಕಾರ್ಯ ನಿರ್ವಹಿಸುವ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯೊಂದನ್ನು ಅನಿಷ್ಟಾನಗೊಳಿಸಬೇಕೆಂಬ ಶರ್ತದಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳು 2004ರ ಯುಪಿಎ ಪ್ರಥಮ ಸರಕಾರಕ್ಕೆ ಬೆಂಬಲ ನೀಡಿದ ಕಾರಣದಿಂದ 2005ರಿಂದ ಈ ಯೋಜನೆ ದೇಶಾದ್ಯಂತ ಜಾರಿಯಾಗಿದೆ. ಇದೀಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರವು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಲಗೊಳಿಸಿ, ಬಡ ರೈತ ಕೃಷಿಕೂಲಿಕಾರರನ್ನು ನಿರ್ಗತಿಕಗೊಳಿಸುತ್ತಿದೆ ಎಂಬುದಾಗಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರೂ ಹಿರಿಯ ರೈತ ಕಾರ್ಮಿಕ ಮುಖಂಡರೂ ಆದ ಕೆ. ಆರ್. ಶ್ರೀಯಾನ್‍ ಟೀಕಿಸಿದರು. ಅವರು ಬುಧವಾರ ನಗರ ತಾಲೂಕು ಪಂಚಾಯತ್ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ಸರಕಾರವನ್ನು ಟೀಕಿಸಿದರು.

cpim_protest_govt_3

ಕೇಂದ್ರ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಯ ಬಜೆಟ್ ಅನುದಾನವನ್ನು ತೀವ್ರ ಕಡಿತಗೊಳಿಸಿದೆ. ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಜಾರಿ ಮಾಡುತ್ತಿದ್ದ ತ್ರಿಪುರಾ ರಾಜ್ಯಕ್ಕೆ ಅನುದಾನ 37% ಮಾತ್ರ ಹಂಚಿಕೆ ಮಾಡಿದೆ. ಕೂಲಿ ಮತ್ತು ಸಲಕರಣಿಗಳ ಅನುಪಾತ 60:40 ಇದ್ದುದನ್ನು 51:49ಕ್ಕೆ ಬದಲಾಯಿಸಲಾಗಿದೆ ಎಂದರೆ ಅದರ ಅರ್ಥ ಕೂಲಿಗೆ ಇರಿಸಿದ ಮೊಬಲಗನ್ನು ಕಡಿಮೆ ಮಾಡಿದೆ ಎಂದು. ಉದ್ಯೋಗ ಖಾತ್ರಿ ಯೋಜನೆಯ ಕಾಯ್ದೆಯನ್ನು ಪರಿವರ್ತಿಸಿ ?ಕೂಲಿಗಾಗಿ ಕಾಳು? ಮಾಡಬೇಕೆಂದು ರಾಜಸ್ಥಾನದ ಬಿಜೆಪಿ ಮುಖ್ಯಮಂತ್ರಿ ಕೂಡಾ ಸೂಚಿಸಿದ್ದಾರೆ.

ಯೋಜನೆ ಅನುತ್ಪಾದಕ ಎಂದು ಕೇಂದ್ರ ಗ್ರಾಮೀಣ ಖಾತೆ ಮಂತ್ರಿ ಗಡ್ಕರಿಯವರೇ ಹೇಳಿಕೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಉದ್ಯೋಗ ಖಾತ್ರಿ ಕಾಯ್ದೆ ಬಿಜೆಪಿಗೆ ಬೇಕಾಗಿಲ್ಲ. ಇದು ಬಿಜೆಪಿ ಸರಕಾರಕ್ಕೆ ಬಡಜನರ ಬಗ್ಗೆ ಇರುವ ಅತೀವ ತಿರಸ್ಕಾರದ ಬಗೆಗಿನ ಸೂಚನೆಯಾಗಿದೆ ಎಂದು ಕೆ. ಆರ್. ಶ್ರೀಯಾನ್‍ರವರು ಟೀಕಿಸಿ, ಕೇಂದ್ರ ಸರಕಾರವು ತನ್ನ ಧೋರಣೆಯನ್ನು ಕೈಬಿಡುವ ಬಗ್ಗೆ ಒತ್ತಾಯಿಸಿ ಹೋರಾಡುವ ಅಗತ್ಯವಿದೆ ಎಂದು ತಿಳಿಸಿದರು.

cpim_protest_govt_2

ಸಿಪಿಐ(ಎಂ) ಮೂಡಬಿದ್ರೆ ವಲಯ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಪಿಐ(ಎಂ) ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ಸಿಪಿಐ(ಎಂ) ದ.ಕ ಜಿಲ್ಲಾ ಸಮಿತಿ ಸದಸ್ಯ ಯು. ಬಿ. ಲೋಕಯ್ಯ, ವಾಸುದೇವ ಉಚ್ಚಿಲ, ಗುರುಪುರ ವಲಯ ಸಮಿತಿ ಕಾರ್ಯದರ್ಶಿ ಸದಾಶಿವದಾಸ್, ಮುನ್ನೂರು ಸಿಪಿಐ(ಎಂ) ಸ್ಥಳೀಯ ಸಮಿತಿ ಕಾರ್ಯದರ್ಶಿ ಜಯಂತ್ ನಾಯ್ಕ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Write A Comment