ಹೊಸದಿಲ್ಲಿ : ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆಯೇ ಎಂದು ವಿಶೇಷ ನ್ಯಾಯಾಲಯ ಸಿಬಿಐಗೆ ಪ್ರಶ್ನಿಸಿದೆ.
ಸಿಂಗ್ ಅವರು ಕಲ್ಲಿದ್ದಲು ಖಾತೆಯನ್ನು ಹೊಂದಿದ್ದ ಅವಧಿಯಲ್ಲಿ ಖ್ಯಾತ ಉದ್ಯಮಿ ಕೆ.ಎಂ. ಬಿರ್ಲಾ, ಕಲ್ಲಿದ್ದಲು ಖಾತೆ ಮಾಜಿ ಕಾರ್ಯದರ್ಶಿ ಪಿ.ಸಿ. ಪಾರೇಖ್ ಮತ್ತು ಇತರರನ್ನು ಒಳಗೊಂಡ ನಿಕ್ಷೇಪ ಹಂಚಿಕೆ ಪ್ರಕರಣದಲ್ಲಿ ಮಾಜಿ ಪ್ರಧಾನಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆಯೇ ಎಂದು ಕೋರ್ಟ್ ಪ್ರಶ್ನಿಸಿದೆ.
ವಿಶೇಷ ಸಿಬಿಐ ನ್ಯಾಯಾಧೀಶ ಭರತ್ ಪರಾಶರ್, ”ಅಂದಿನ ಕಲ್ಲಿದ್ದಲು ಸಚಿವರನ್ನು ವಿಚಾರಣೆಗೆ ಗುರಿಪಡಿಸುವುದು ಅಗತ್ಯವೆಂದು ನಿಮಗೆ ಅನಿಸಲಿಲ್ಲವೇ? ಸ್ಪಷ್ಟ ಚಿತ್ರಣ ಪಡೆಯಲು ಅವರ ಹೇಳಿಕೆ ಅಗತ್ಯ ಎಂದು ನಿಮಗೆ ಹೊಳೆಯಲಿಲ್ಲವೆ?” ಎಂದು ಸಿಬಿಐಗೆ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ತನಿಖಾಧಿಕಾರಿ, ”ತನಿಖೆಯ ವೇಳೆ ಪ್ರಧಾನ ಮಂತ್ರಿಗಳ ಕಚೇರಿಯ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಅಂದಿನ ಕಲ್ಲಿದ್ದಲು ಸಚಿವರ ಹೇಳಿಕೆ ಪಡೆಯುವುದು ಅಗತ್ಯವೆಂದು ಅನಿಸಲಿಲ್ಲ” ಎಂದು ಕೋರ್ಟಿಗೆ ತಿಳಿಸಿದರು.
ಆದಾಗ್ಯೂ, ಅಂದಿನ ಕಲ್ಲಿದ್ದಲು ಸಚಿವರ ವಿಚಾರಣೆ ನಡೆಸಲು ಅನುಮತಿ ಇರಲಿಲ್ಲ ಎಂದೂ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು.
ಬಿರ್ಲಾ ಅವರ ಹಿಂಡಾಲ್ಕೋ ಕಂಪನಿಗೆ 2005ರಲ್ಲಿ ಒರಿಸ್ಸಾದ ತಾಲಬ್ರಿಯಾ II ಮತ್ತು III ರಲ್ಲಿರುವ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಾದಾಗ ಕಲ್ಲಿದ್ದಲು ಖಾತೆ ಮಾಜಿ ಪ್ರಧಾನಿಯವರ ಅಧೀನದಲ್ಲಿತ್ತು.
”ಪ್ರಧಾನಿ ಕಚೇರಿಯ ಅಧಿಕಾರಿಗಳನ್ನು ಪ್ರಶ್ನಿಸಲಾಗಿದೆ. ಅಧಿಕಾರಿಗಳ ಹೇಳಿಕೆ ಹಿನ್ನೆಲೆಯಲ್ಲಿ ಅಂದಿನ ಕಲ್ಲಿದ್ದಲು ಸಚಿವರನ್ನು ವಿಚಾರಣೆ ನಡೆಸಿಲ್ಲ. ಅಲ್ಲದೆ ಅದಕ್ಕೆ ಅನುಮತಿಯೂ ಇರಲಿಲ್ಲ. ಅವರ ಹೇಳಿಕೆ ಅಗತ್ಯವೆಂದು ಭಾವಿಸಲಿಲ್ಲ” ಎಂದು ತನಿಖಾಧಿಕಾರಿ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು.
ಲೇಖನಕ್ಕೆ (3) ಅನಿಸಿಕೆಗಳಿವೆ.ಬೇರೆ ಓದುಗರ ಅನಿಸಿಕೆಗಳನ್ನು ಓದಿಮತ್ತುನಿಮ್ಮ ಅನಿಸಿಕೆಗಳನ್ನು ಬರೆಯಿರಿ.