ಕನ್ನಡ ವಾರ್ತೆಗಳು

ದೇಶದ ಅರ್ಥ ವ್ಯವಸ್ಥೆಗೆ ಚೇತನ ತುಂಬುವ ಸುಧಾರಣಾ ಕ್ರಮಗಳ ಹಾದಿಯನ್ನು ಸುಗಮಗೊಳಿಸುವ ನಿರೀಕ್ಷೆಯೊಂದಿಗೆ ಸಂಸತ್‌ನ ಚಳಿಗಾಲದ ಅಧಿವೇಶನ.

Pinterest LinkedIn Tumblr

parliment_india_photo_1

ಹೊಸದಿಲ್ಲಿ: ದೇಶದ ಅರ್ಥ ವ್ಯವಸ್ಥೆಗೆ ಚೇತನ ತುಂಬುವ ಸುಧಾರಣಾ ಕ್ರಮಗಳ ಹಾದಿಯನ್ನು ಸುಗಮಗೊಳಿಸುವ ನಿರೀಕ್ಷೆಯೊಂದಿಗೆ ಸಂಸತ್‌ನ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭಗೊಳ್ಳಲಿದೆ. ಈ ಬಾರಿ ಭರ್ತಿ 39 ವಿಧೇಯಕಗಳನ್ನು ಮಂಡಿಸಲು ಸರಕಾರ ಮುಂದಾಗಿದೆ.

ವಿಮೆ, ಬ್ಯಾಂಕಿಂಗ್, ಜವಳಿ, ತೆರಿಗೆ, ಕಲ್ಲಿದ್ದಲು, ಔಷಧ, ಕಾನೂನು, ಇಂಧನ, ಪಡಿತರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಪ್ರಮುಖ ವಿಧೇಯಕಗಳನ್ನು ಮಂಡಿಸಿ ಅನುಮೋದನೆ ಪಡೆಯುವುದು ಸರಕಾರದ ಆದ್ಯತೆಯಾಗಿದೆ. ಇದಲ್ಲದೇ ಈ ಅಧಿವೇಶನದಲ್ಲಿ ಸ್ಥಿತಿವಂತರಿಗೆ ಎಲ್‌ಪಿಜಿ ಪೂರೈಕೆ ನಿರ್ಬಂಧ, ಉದ್ಯಮ ರಂಗಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ವೇತನದಾರರು ಮತ್ತು ಮಧ್ಯಮ ವರ್ಗದ ಜನರಿಗೆ ತೆರಿಗೆ ವಿನಾಯಿತಿ ಹೆಚ್ಚಳದ ಸಾಧ್ಯತೆಯ ಕುರಿತ ಇನ್ನೂ ಅನೇಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಸರಕಾರ ಸಿದ್ಧತೆ ನಡೆಸಿದೆ.

ಅಧಿವೇಶನದಲ್ಲಿ ಎರಡನೇ ಪೀಳಿಗೆಯ ಆರ್ಥಿಕ ಸುಧಾರಣಾ ಕ್ರಮಗಳನ್ನು ಅನಾವರಣಗೊಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಕಟಿಸಿದ್ದಾರೆ. ಒಟ್ಟಾರೆ ಜಿಡಿಪಿ ದರವನ್ನು ಶೇ.6ಕ್ಕೆ ಏರಿಸಲು ಅಗತ್ಯವಿರುವ ಸರ್ವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಆದರೆ ಸರಕಾರದ ಈ ನಡೆ ಖಂಡಿಸಿ ಪ್ರತಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಮುಗಿಬೀಳಲು ಸಜ್ಜಾಗಿವೆ. ಇದರಿಂದ ಸಹಜವಾಗಿಯೇ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ದಾಳಿ, ಪ್ರತಿಭಟನೆ, ಕಲಾಪ ಬಹಿಷ್ಕಾರ, ಎಲ್ಲವೂ ನೀರಿಕ್ಷಿತವಾಗಿವೆ.

ಅಧಿವೇಶನದ ಮುನ್ನಾ ದಿನವಾದ ಭಾನುವಾರ ಸಂಸದೀಯ ವ್ಯವಹಾರಗಳ ಸಚಿವ ರಾಜೀವ್ ಪ್ರತಾಪ್ ರೂಡಿ ಅವರು ಸರ್ವಪಕ್ಷ ಸಭೆ ನಡೆಸಿ, ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಪ್ರತಿಪಕ್ಷಗಳ ಸಹಕಾರ ಕೋರಿದರು. ಆದರೆ ಶಾರದಾ ಚಿಟ್‌ಫಂಡ್ ಹಗರಣದಲ್ಲಿ ತನ್ನ ಸಂಸದನನ್ನು ಸಿಬಿ‌ಐ ಬಂಧಿಸಿದ ಹಿನ್ನೆಲೆಯಲ್ಲಿ ಮೋದಿ ಸರಕಾರದ ವಿರುದ್ಧ ಮುನಿಸಿಕೊಂಡು ತೃಣಮೂಲ ಕಾಂಗ್ರೆಸ್ ಸರ್ವಪಕ್ಷ ಸಭೆಗೆ ಗೈರಾಗಿತ್ತು.

ಇತ್ತೀಚೆಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂಸಿಂಗ್ ಯಾದವ್ ಅಧ್ಯಕ್ಷತೆಯಲ್ಲಿ ಜೆಡಿಯು, ಆರ್‌ಜೆಡಿ, ಜೆಡಿ‌ಎಸ್, ಐ‌ಎನ್‌ಎಲ್‌ಡಿ ನಾಯಕರು ಸಭೆ ನಡೆಸಿ ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿಯ ಕಾರ್ಯನೀತಿಗಳನ್ನು ಖಂಡಿಸಲು ಕಾರ್ಯತಂತ್ರಗಳನ್ನು ರೂಪಿಸಿಕೊಂಡಿದ್ದರು. ಇನ್ನೊಂದೆಡೆ ಕಾಂಗ್ರೆಸ್ ತನ್ನ ಬಾಣಗಳ ಬತ್ತಳಿಕೆಯನ್ನು ಭದ್ರ ಮಾಡಿಕೊಂಡಿದೆ. ಯೋಜನಾ ಆಯೋಗದ ರದ್ಧತಿ, ಕಪ್ಪುಹಣದ ವಾಪಸಾತಿ ವಿಷಯದಲ್ಲಿ ವೈಫಲ್ಯ, ಗಡಿಯಲ್ಲಿನ ಚೀನಾ ಅತಿಕ್ರಮಣ, ಯುದ್ಧ ನೌಕೆಗಳ ಸರಣಿ ಅವಘಡಗಳು, ಗುಜರಾತ್ ಕೋಮುಗಲಭೆಯ ಕುರಿತ ನಾನಾವತಿ ಆಯೋಗದ ವರದಿ ಸೇರಿದಂತೆ ಅನೇಕ ವಿಷಯಗಳನ್ನು ಅಸ್ತ್ರಗಳನ್ನಾಗಿ ಮಾಡಿಕೊಂಡು ಸರಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ. ಈ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ಮಹತ್ವ ಪಡೆದಿತ್ತು.

Write A Comment