ಕುಂದಾಪುರ: ಹೆಬ್ಬಾವು ಸೆರೆಹಿಡಿಯಲು ಮುಂದಾದ ಯುವಕನೋರ್ವನಿಗೆ ಹೆಬ್ಬಾವು ಬಲವಾಗಿ ಕಚ್ಚಿದ ಘಟನೆ ಕೋಟೇಶ್ವರ ಅಂಕದಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ರಾತ್ರಿ ನಡೆದಿದೆ.
ವ್ರತ್ತಿಯಲ್ಲಿ ಚಾಲಕರಾದ ಮಾರ್ಕೋಡು ನಿವಾಸಿ ಮಾರುತಿ(25) ಎನ್ನುವವರು ಹೆಬ್ಬಾವಿನಿಂದ ಕಚ್ಚಿಸಿಕೊಂಡು ಚಿಕಿತ್ಸೆಗೊಳಗಾದವರು.
ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ 12 ಅಡಿ ಉದ್ದದ ಹೆಬ್ಬಾವು ಕಂಡು ಸುಮಾರು 150 ಕ್ಕೂ ಅಧಿಕ ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಕೆಲವು ಯುವಕರು ಹೆಬ್ಬಾವು ಹಿಡಿಯುವ ಸಾಹಸಕ್ಕೆ ಮುಂದಾಗಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಹೆಬ್ಬಾವು ಜನರನ್ನು ನೋಡಿ ಬೆದರಿದ್ದು ಓಡಲು ಯತ್ನಿಸಿದಾಗ ಯುವಕರು ಅದನ್ನು ಹಿಡಿಯಲು ಧಾವಿಸಿದ್ದಾರೆ. ಈ ನಡುವೆ ಕತ್ತಲಿನಲ್ಲಿ ಮಾರುತಿಯವರ ಬಲಕೈಗೆ ಹೆಬ್ಬಾವು ಬಲವಾಗಿ ಕಚ್ಚಿದೆ.
ಆಗಿದ್ದೇನು?: ಹಾವು ಹಿಡಿಯಲು ಯತ್ನಿಸುತ್ತಿರುವಂತೆಯೇ ಮೂರು ಜನರು ಪೊದೆಯೊಳಗೆ ಹೋಗುತ್ತಿದ್ದ ಹೆಬ್ಬಾವಿನ ಬಾಲಕ್ಕೆ ಕೈ ಹಾಕಿ ಹಿಡಿದಿದ್ದಾರೆ. ಈ ವೇಳೆ ತಲೆಯ ಭಾಗವನ್ನು ಮಾರುತಿ ಹಿಡಿಯಲು ಯತ್ನಿಸಿದ್ದು, ಹೆಬ್ಬಾವು ಅವರ ಮೇಲೆ ದಾಳಿ ನಡೆಸುವ ಸಲುವಾಗಿ ಕೈಗೆ ಕಚ್ಚಿದೆ ಎನ್ನಲಾಗಿದೆ. ಈ ವೇಳೆ ಮಾರುತಿಯವರ ಕೈಯಲ್ಲಿ ವಿಪರೀತ ರಕ್ತಸ್ರಾವವಾಗುತ್ತಿದ್ದರೂ ಕೂಡ ಅದನ್ನು ಲೆಕ್ಕಿಸದ ಅವರು ಹೆಬ್ಬಾವನು ಹೆಡೆಮುರಿಕಟ್ಟಿ ಚೀಲವೊಂದಕ್ಕೆ ತುಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಬಳಿಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆ ಪಡೆದು ಕುಂದಾಪುರ ಸರಕಾರಿ ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಅರಣ್ಯ ಇಲಾಖೆಯವರು ಆಗಮಿಸಿ ಹೆಬ್ಬಾವು ಹಿಡಿಯುವಲ್ಲಿ ಸ್ಪಂದಿಸಿದ್ದರು.
ಹೆಬ್ಬಾವಿನಿಂದ ಕಚ್ಚಿಸಿಕೊಂಡ ಮಾರುತಿ ಸದ್ಯ ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುರುವಾರ ಬೆಳಿಗ್ಗೆ ಮನೆಗೆ ಮರಳಿದ್ದಾರೆ. ವೈದ್ಯರು ಯಾವುದೇ ತೊಂದರೆಯಿಲ್ಲ ಎಂದು ತಿಳಿಸಿದ್ದು, ಈಗ ಕೈ ಸ್ವಲ್ಪ ನೋವಿದೆ ಎಂದು ಮಾರುತಿ ತಿಳಿಸಿದ್ದಾರೆ.