ಕನ್ನಡ ವಾರ್ತೆಗಳು

ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಿ- ಉಡುಪಿ ಜಿಲ್ಲಾಧಿಕಾರಿ ಡಾ. ವಿಶಾಲ್ ಖಡಕ್ ಸೂಚನೆ

Pinterest LinkedIn Tumblr

Udupi_DC_Vishal

ಉಡುಪಿ: ಉಡುಪಿ ನಗರ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ಸೂಚಿಸಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ನಡೆದ ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉಡುಪಿ ನಗರದ ವ್ಯಾಪ್ತಿಯಲ್ಲಿ ಹಲವು ಕಡೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಹಲವು ಕಡೆಗಳಲ್ಲಿ ರಸ್ತೆಗಳ ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದು ಕಂಡುಬರುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ವಾಹನ ನಿಲುಗಡೆಗೆ ಅಗತ್ಯವಿರುವ ಸ್ಥಳಗಳನ್ನು ಗುರುತಿಸುವಂತೆ ಹಾಗೂ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪೋಲಿಸ್ ಇಲಾಖೆ ಹಾಗೂ ನಗರಸಭೆಯ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ನಗರದಲ್ಲಿ ವಾಹನಗಳ ಮಿತಿಮೀರಿದ ವೇಗ ನಿಯಂತ್ರಿಸಲು ಹಾಗೂ ಪಾದಚಾರಿಗಳಿಗೆ ಮತ್ತು ಶಾಲಾ ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಅಗತ್ಯವಿರುವ ಕಡೆ ರಸ್ತೆ ಹುಬ್ಬು ಗಳನ್ನು ಮತ್ತು ಝೀಬ್ರಾ ಕ್ರಾಸ್ ಗಳನ್ನು ಹಾಗೂ ವೇಗ ಮಿತಿಯ ಸೂಚನಾ ಫಲಕಗಳನ್ನು ನಿರ್ಮಿಸುವಂತೆ ಪೌರಾಯುಕ್ತರಿಗೆ ನಿರ್ದೇಶನ ನೀಡಿದರು.
ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳಿಂದ ಹಲವು ಜೀವ ಹಾನಿಯಾಗುತ್ತಿದ್ದು, ಅಂತಹ ಅಪಘಾತ ವಲಯಗಳನ್ನು ಗುರುತಿಸಿ ಆ ಪ್ರದೇಶದಲ್ಲಿ ಸೂಚನಾ ಫಲಕಗಳನ್ನು, ರಿಫ್ಲೆಕ್ಟರ್ ಗಳನ್ನು ಅಳವಡಿಸಲು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ನಿಟ್ಟೂರು ಬಳಿ ಗುರುತಿಸಿರುವ ಅಪಘಾತ ಸ್ಥಳದಲ್ಲಿ ಸೂಕ್ತ ಬೀದಿ ದೀಪದ ವ್ಯವಸ್ಥೆ ಹಾಗೂ ಸೂಚನಾ ಫಲಕ ಅಳವಡಿಸುವಂತೆ ಹೇಳಿದರು.

ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಅಗತ್ಯ ಮೂಲಭೂತ ಅವಶ್ಯಕತೆಗಳಾದ ಶೌಚಾಲಯಗಳ ಸ್ವಚ್ಛತೆ, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಉತ್ತಮ ಗುಣಮಟ್ಟದ ಆಸನ ವ್ಯವಸ್ಥೆ ಹಾಗೂ ಮಳೆಗಾಲದಂತೆ ಜಾರದಂತೆ ಟೈಲ್ಸ್ ಗಳನ್ನು ಅಳವಡಿಸಿ, ಬಸ್ ನಿಲ್ದಾಣವನ್ನು ಜನಸ್ನೇಹಿಯಾಗುವಂತೆ ರೂಪಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ , ನಗರದಲ್ಲಿರುವ ಆಟೋ ಮತ್ತು ಟ್ಯಾಕ್ಸಿ ನಿಲ್ದಾಣಗಳ ಮಾಹಿತಿ ನೀಡುವಂತೆ ಪೌರಾಯುಕ್ತರಿಗೆ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ. ಕನಗವಲ್ಲಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಅರುಣ್ ಕುಮಾರ್ ಸಿಂಗ್, ಪೌರಾಯುಕ್ತ ಶ್ರೀಕಾಂತ ರಾವ್ ,ಪೋಲೀಸ್, ಲೋಕೋಪಯೋಗಿ , ರಾಷ್ಟ್ರೀಯ ಹೆದ್ದಾರಿ ಹಾಗೂ ಮತ್ತಿರರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment