ಬಂಟ್ವಾಳ,ನ.18: ರಾಜ್ಯದ ಭ್ರಷ್ಟ ಸಚಿವರನ್ನು ಸಂಪುಟದಿಂದ ಕೈಬಿಡಬೇಕು, ಕೇಂದ್ರ ಸರಕಾರವು ತೈಲ ಬೆಲೆಯನ್ನು ಕಡಿಮೆಗೊಳಿಸಿರುವುದರಿಂದ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸು ಪ್ರಯಾಣ ದರವನ್ನು ಇಳಿಸುವಂತೆ ಒತ್ತಾಯಿಸಿ ಬಿ.ಜೆ.ಪಿ ಕಾರ್ಯಕರ್ತರು ಮಂಗಳವಾರ ಬಿ.ಸಿ ರೋಡಿನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆಗೊಳಿಸಿ ಪ್ರತಿಭಟಿಸಿದರು. ಇದಕ್ಕೂ ಮೊದಲು ಬಿ.ಸಿ.ರೋಡಿನ ಮೇಲ್ಸ್‌ತುವೆ ಆಡಿಯಲ್ಲಿ ಪ್ರತಿಭಟನಾಕಾರರನ್ನು ಉದ್ಧೇಶಿಸಿ ರಾಜ್ಯ ಬಿ.ಜೆ.ಪಿ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ ಭಟ್ ಮಾತನಾಡಿ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಡಿಸೇಲ್ ಹಾಗೂ ಪಟ್ರೋಲು ದರವನ್ನು ಕಡಿಮೆ ಮಾಡಿದ್ದರೂ ರಾಜ್ಯ ಸರಕಾರ ಬಸ್ಸು ಪ್ರಯಾಣ ದರವನ್ನು ಕಡಿಮೆಗೊಳಿಸದೇ ಪ್ರಯಾಣಿಕರಿಗೆ ಅನ್ಯಾಯವೆಸಗುತ್ತಿದೆ.
ಕರ್ನಾಟಕದಲ್ಲಿ ಆಡಳಿತ ನಡೆಸುವ ಕಾಂಗ್ರೆಸ್ ಸರಕಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಹೆಣ್ಮಕ್ಕಳು, ಮಹಿಳೆಯರಿಗೆ ರಕ್ಷಣೆ ಇಲ್ಲದಂತ ಪರಿಸ್ಥಿತಿ ಉಂಟಾಗಿದೆ. ರಾಜ್ಯ ಸರಕಾರ ಕೇವಲ ಘೋಷಣೆಯಲ್ಲೇ ಕಾಲ ಕಳೆಯುತ್ತಿದೆ ವಿನಹಃ ರಾಜ್ಯದ ಜನತೆಯ ಹಿತದೃಷ್ಠಿಯಿಂದ ಯಾವುದೇ ಯೋಜನೆ ರೂಪಿಸಿಲ್ಲ ಎಂದು ಟೀಕಿಸಿದರು.
ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ ಮಾತನಾಡಿ ಕಳೆದ ಐದು ತಿಂಗಳ ಹಿಂದೆ ಆಡಳಿತಕ್ಕೆ ಬಂದ ಮೋದಿ ನೇತೃತ್ವದ ಸರಕಾರ ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತನ್ನು ಉಳಿಸುವ ಮೂಲಕ ಸಮೃದ್ಧ ಬಾರತ ನಿರ್ಮಾಣಕ್ಕೆ ಹೆಜ್ಜೆ ಇಟ್ಟಿದೆ ಎಂದರು.ಹಿಂದಿನ ಕೇಂದ್ರ ಸರಕಾರ ನಿರಂತರ ಜನೋಪಯೋಗಿ ವಸ್ತುಗಳ ಬೆಲೆಯನ್ನು ಏರಿಸಿದ್ದರೆ ಮೋದಿ ಸರಕಾರ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಸುವ ಮೂಲಕ ಬಡವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದೆ. ಜನ್-ಧನ್‌ನಂತಹ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಸ್ವಾವಲಂಬನೆಯ ಬದುಕು ಕಲ್ಪಿಸಿದೆ. ಆದರೆ ಮೋದಿ ಏನು ಮಾಡಿದ್ದಾರೆಂದು ಪ್ರಶ್ನಿಸುವುದು ನಾಚಿಕೆಗೇಡಿನ ವಿಚಾರವಾಗಿದೆ ತೈಲ ಬೆಲೆ ಇಳಿಕೆಯಾದರೂ ಬಡವರ ಪರ ಎನ್ನುವ ಕರ್ನಾಟಕ ಸರಕಾರ ಬಸ್ಸು ಪ್ರಯಾಣ ದರವನ್ನು ಇಳಿಕೆಮಾಡದಿರುವುದು ಖಂಡನೀಯವಾಗಿದೆ ಎಂದರು. ಸಭೆಯ ಬಳಿಕ ಬಿ.ಸಿ.ರೋಡು ವೃತ್ತದ ವರೆಗೆ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಸುಮಾರು ಹತ್ತು ನಿಮಿಷಗಳ ಕಾಲ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.
ಪಕ್ಷದ ಮಖಂಡರಾದ ಪುರುಷ ಎನ್. ಸಾಲ್ಯಾನ್, ತುಂಗಪ್ಪ ಬಂಗೇರ, ಚೆನ್ನಪ್ಪ ಕೋಟ್ಯಾನ್, ನಳಿನಿ ಶೆಟ್ಟಿ, ದಿನೇಶ್ ಭಂಡಾರಿ, ಆನಂದ ಶಂಭೂರು,ದಿನೇಶ್ ಅಮ್ಟೂರು, ವಿಲಾಸಿನಿ ಶಾಂತವೀರ ಪೂಜಾರಿ, ಚಂದ್ರ ಶೇಖರ ಟೈಲರ್, ರೋನಾಲ್ಡ್ ಡಿಸೋಜ ಅಮ್ಟಾಡಿ, ಸದಾನಂದ ಮಲ್ಲಿ, ಪುಷ್ಪರಾಜ ಶೆಟ್ಟಿ, ದೇವಪ್ಪ ಪೂಜಾರಿ ತನಿಯಪ್ಪ ಗೌಡ, ಜನಾರ್ಧನ ಕುಲಾಲ್ ಬೊಂಡಾಲ, ಭಾಸ್ಕರ ಟೈಲರ್ ಕಾಮಾಜೆ, ಸುಗುಣ ಕಿಣಿ ಮೊದಲಾದವರು ಭಾಗವಹಿಸಿದ್ದರು. ಬಿಜೆಪಿ ಪ್ರಧಾನ ಕಾರ್‍ಯದರ್ಶಿ ರಾಮದಾಸ್ ಬಂಟ್ವಾಳ್ ಸ್ವಾಗತಿಸಿ, ವಂದಿಸಿದರು.
