ಕನ್ನಡ ವಾರ್ತೆಗಳು

ಮಡೆಸ್ನಾನ, ಪಂಕ್ತಿಭೇದ, ಎಡೆಸ್ನಾನ ನಡೆದರೆ ನ.27 ಮತ್ತು 28ರಂದು ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಮುತ್ತಿಗೆ : ಕೆ.ಎಸ್.ಶಿವರಾಮ್

Pinterest LinkedIn Tumblr

manavata_jatha_samaropa_1

ಸುಬ್ರಹ್ಮಣ್ಯ, ನ.16: ಎಡೆಸ್ನಾನ ಪದ್ಧತಿ ನಾಗರಿಕ ಸಂಸ್ಕೃತಿಯಲ್ಲ. ಮಡೆಸ್ನಾನದ ಬದಲು ಎಡೆಸ್ನಾನವನ್ನು ಜಾರಿಗೆ ತರುವ ಧೋರಣೆ ಖಂಡನೀಯವಾಗಿದ್ದು, ಈ ಬಾರಿಯ ಕುಕ್ಕೆ ಸುಬ್ರಹ್ಮಣ್ಯ ಜಾತ್ರೋತ್ಸವದ ವೇಳೆ ಮಡೆಸ್ನಾನ ನಡೆದರೆ ನ.27 ಮತ್ತು 28ರಂದು ವಿವಿಧ ಸಂಘಟನೆಗಳು ಜೊತೆಗೂಡಿ ದೇವಳಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್ ಎಚ್ಚರಿಸಿದ್ದಾರೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಸಿ.ಪಿ.ಐ (ಎಂ) ಕರ್ನಾಟಕ, ಕರ್ನಾಟಕ ಆದಿ ವಾಸಿ ರಕ್ಷಣಾ ಪರಿಷತ್ತು, ದಲಿತ ಹಕ್ಕುಗಳ ಹೋರಾಟ ಸಮಿತಿ ನೇತೃತ್ವ ದಲ್ಲಿ ಜನರ ವಿಮೋಚನೆಗಾಗಿ ಮಡೆ ಸ್ನಾನ, ಪಂಕ್ತಿಭೇದ, ಎಡೆಸ್ನಾನದಂತಹ ಸಾಮಾಜಿಕ ಅನಿಷ್ಠ ಪದ್ಧತಿಗಳ ನಿಷೇಧಕ್ಕೆ ಆಗ್ರಹಿಸಿ ಮತ್ತು ವೌಢ್ಯ ಪ್ರತಿಬಂಧಕ ಖಾಯ್ದೆ ಜಾರಿಗೆ ಒತ್ತಾಯಿಸಿ, ಮಾನವತೆ ಕಡೆಗೆ ನಮ್ಮ ನಡಿಗೆ ಜಾಗೃತಿ ಜಾಥಾವು ಮೈಸೂರಿನಿಂದ ಹೊರಟು ಸುಬ್ರಹ್ಮಣ್ಯಕ್ಕೆ ಬಂದು ಸುಬ್ರಹ್ಮಣ್ಯದ ಕುಮಾರಧಾರಾ ಜಂಕ್ಷನ್‌ನಲ್ಲಿ ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಎಡೆಸ್ನಾನ ಮಡೆಸ್ನಾನದ ರೂಪಾಂತ ರವಾಗಿದೆ. ದೇವರಿಗೆ ನೀಡುವ ಮತ್ತು ತಿನ್ನುವ ಪ್ರಸಾದದ ಮೇಲೆ ತುಳಿದು ಹೊರಳಾಡುವ ಪದ್ಧತಿ ಬೇಡ. ಸಮಾಜದಲ್ಲಿ ಜಾತಿ, ಮತ, ಧರ್ಮ ಭೇದವಿಲ್ಲದೆ ಸಮಾನತೆ ಮೂಡಿಸುವುದಕ್ಕಾಗಿ ನಾವು ಜಾಗೃತಿ ಅಭಿಯಾನ ನಡೆಸುತ್ತಿದ್ದೇವೆ. ಮಡೆಸ್ನಾನ, ಎಡೆಸ್ನಾನ, ಪಂಕ್ತಿಭೇದ ಈ ಬಾರಿಯ ಜಾತ್ರೋತ್ಸವದ ವೇಳೆ ನಡೆಯಬಾರದು ಎಂದು ಜಿಲ್ಲಾಡಳಿತ, ದೇವಳದ ಆಡಳಿತಕ್ಕೆ ನಾವು ವಿನಂತಿ ಮಾಡಿಕೊಳ್ಳುತ್ತೇವೆ. ಅಷ್ಟಕ್ಕೂ ಅದನ್ನು ಮೀರಿದರೆ ನ.27 ಮತ್ತು 28ರಂದು ರಾಜ್ಯದ ಮೂಲ ಆದಿವಾಸಿಗಳು ಸೇರಿದಂತೆ ವಿವಿಧ ಸಂಘಟನೆಗಳ ಜೊತೆಗೂಡಿ ಸಹಸ್ರಾರು ಮಂದಿ ಯೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಹೇಳಿದರು.

ಮೌಢ್ಯ ಪ್ರತಿಬಂಧಕ ಕಾಯ್ದೆಗೆ ಒತ್ತಾಯ:
ಜಾಥಾದಲ್ಲಿ ಮಾತನಾಡಿದ ಅವರು, ಮಡೆಸ್ನಾನವನ್ನು ಸುಪ್ರೀಂಕೋರ್ಟ್ ನಿಷೇಧ ಮಾಡಿರುವುದು ಸ್ವಾಗತಾರ್ಹ ವಾದುದು. ಇದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾತ್ರ ಅಲ್ಲ, ರಾಜ್ಯದಾದ್ಯಂತ ಹಲವು ದೇವಳಗಳಲ್ಲಿ ಮಡೆಸ್ನಾನ, ಪಂಕ್ತಿಭೇದ ಎಡೆಸ್ನಾನದಂತಹ ಸಾಮಾಜಿಕ ಅನಿಷ್ಟ ಪದ್ಧತಿಗಳು ನಿರ್ಮೂಲನೆ ಆಗಬೇಕು. ಸರಕಾರ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಒತ್ತಾಯಿಸಿದರು. ನಾವು ಬ್ರಾಹ್ಮಣ ವಿರೋಧಿಗಳಲ್ಲ. ಬ್ರಾಹ್ಮಣ್ಯ ವಿರೋಧಿಗಳಷ್ಟೆ. ಜೀವವಿರೋಧಿ ಸಿದ್ಧಾಂತದ ವಿರುದ್ಧ ನಮ್ಮ ಹೋರಾಟ ಎಂದು ಅವರು ಹೇಳಿದರು. ಹಿಂದಿನ ಸರಕಾರಗಳು ಸತಿಪದ್ಧತಿ, ದೇವದಾಸಿ ಪದ್ಧತಿ, ಬಾಲ್ಯ ವಿವಾಹ, ಬೆತ್ತಲೆ ಸೇವೆ, ಪ್ರಾಣಿ ಬಲಿ, ಅಜಲು ಪದ್ಧತಿ ಮುಂತಾದ ಅನಿಷ್ಟ ಪದ್ಧತಿಗಳನ್ನು ನಿಷೇಧಿಸುವಂತೆ ಈಗಿನ ಸರಕಾರವು ಮಡೆಸ್ನಾನ, ಪಂಕ್ತಿಭೇದ, ಎಡೆಸ್ನಾನ ಅಮಾನವೀಯ ಹಾಗೂ ಸಂವಿಧಾನ ಬಾಹಿರ ಆಚರಣೆಗಳನ್ನು ನಿಷೇಧಿಸಿ ಖಂಡನಾರ್ಹ ಅಪರಾಧ ವನ್ನಾಗಿ ಘೋಷಿಸುವ ಮೂಲಕ ಮಾನವ ಘನತೆಯನ್ನು, ನಾಗರಿಕ ಸಮಾಜದ ಗೌರವವನ್ನು, ಸಂವಿಧಾನದ ನಿರ್ದೇಶನವನ್ನು ಎತ್ತಿಹಿಡಿಯಬೇಕೆಂದು ಸಿ.ಪಿ.ಎಂ.ನ ಜಿಲ್ಲಾ ಕಾರ್ಯಕಾರಿಣಿ ಮಂಡಳಿ ಸದಸ್ಯ ಬಿ.ಎಂ.ಭಟ್ ಒತ್ತಾಯಿಸಿದರು.

ಮಾನವನ ಮಧ್ಯೆ ಮಾನವೀಯತೆ ಹರಡಬೇಕು. ಆದರೆ ಆಚರಣೆಯಲ್ಲಿ ಮೌಢ್ಯದ ಅಂಧಕಾರ ತೊರೆಯಬೇಕು. ಇದರ ಬಗ್ಗೆ ಜನರಲ್ಲಿ ಮೊದಲು ಜಾಗೃತಿ ಮಾಡಬೇಕು ಎಂದು ಪ್ರೊ.ಕೆ.ಎಸ್.ಭಗವಾನ್ ಹೇಳಿದರು.

ಜಾಥಾದಲ್ಲಿ ಮಡೆಸ್ನಾನ ವಿರೋಧಿ ಹೋರಾಟಗಾರ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಉಪಾಧ್ಯಕ್ಷ ಶಶಿಧರ ಸಂಗಾಪುರ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತು ಅಧ್ಯಕ್ಷ ಎಂ.ಕೃಷ್ಣಯ್ಯ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹಸಂಚಾಲಕ ವಿಠ್ಠಲ ಮಲೆಕುಡಿಯ, ದಲಿತ ಹೋರಾಟ ಹಕ್ಕುಗಳ ಬೆಳ್ತಂಗಡಿ ಅಧ್ಯಕ್ಷ ಶೇಖರ್ ಎಲ್., ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಸದಸ್ಯರು, ಸಿ.ಪಿ.ಎ.ಎಂ., ಆದಿವಾಸಿ ರಕ್ಷಣಾ ಪರಿಷತ್ತು, ದಲಿತ ಹಕ್ಕುಗಳ ಹೋರಾಟ ಸಮಿತಿ ಸಂಘಟನೆಗಳ ಸದಸ್ಯರು ಸೇರಿದಂತೆ 200ಕ್ಕೂ ಮಿಕ್ಕಿ ಜನ ಜಾಥಾದಲ್ಲಿ ಪಾಲ್ಗೊಂಡಿದ್ದರು.

Write A Comment