ಕನ್ನಡ ವಾರ್ತೆಗಳು

ಬ್ಯಾಂಕ್ ಎಂಪ್ಲಾಯೀಸ್ ಪೆಡರೇಶನ್ ಆಫ್ ಇಂಡಿಯಾ-ಕರ್ನಾಟಕದ 4ನೇ ಸಮ್ಮೇಳನ ಉದ್ಘಾಟನೆ.

Pinterest LinkedIn Tumblr

Befi_news_photo_1

ಮಂಗಳೂರು, ನ.16: ಕಾರ್ಪೋರೇಟ್ ರಂಗಗಳಿಗೆ ನೀಡುವ ಸಾಲ ಮರು ಪಾವತಿಯಾಗದಿರುವುದರಿಂದ ಇಂದು ಬ್ಯಾಂಕಿಂಗ್ ಕ್ಷೇತ್ರ ಸಂಕಷ್ಟದಲ್ಲಿದೆ. ಕೈಗಾರಿಕಾ ವಲಯಕ್ಕೆ ನೀಡಲಾಗಿರುವ ಸಾಲಗಳನ್ನು ವಸೂಲಿ ಮಾಡಿಕೊಂಡರೆ ಬ್ಯಾಂಕಿಂಗ್ ವ್ಯವಹಾರ ಸುಸೂತ್ರವಾಗಿ ನಡೆಯಬಲ್ಲದು ಎಂದು ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ಸೀತಾರಾಂ ಯೆಚೂರಿ ಅಭಿಪ್ರಾಯ ಪಟ್ಟಿದ್ದಾರೆ.

ಬ್ಯಾಂಕ್ ಎಂಪ್ಲಾಯೀಸ್ ಪೆಡರೇ ಶನ್ ಆಫ್ ಇಂಡಿಯಾ-ಕರ್ನಾಟಕದ 4ನೆ ಸಮ್ಮೇಳನವನ್ನು ನಗರದ ಸಿಬಿಒಒ ಸೆಂಟರ್‌ನಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Befi_news_photo_2

ರೈತರಿಗೆ ಸಾಲ ನೀಡಲು ಹತ್ತಾರು ಭದ್ರತೆ ಕೇಳುವ ಬ್ಯಾಂಕ್‌ನವರು ಉದ್ಯಮಿಗಳಿಗೆ ಕಣ್ಣು ಮುಚ್ಚಿ ಸಾಲದ ನೆರವು ನೀಡುತ್ತಿವೆ. ಕಾರ್ಪೊರೇಟ್ ಕ್ಷೇತ್ರದವರು ಪಡೆ ದುಕೊಂಡ ಸಾಲಗಳನ್ನು ಮರು ಪಾವತಿ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಾರೆ. ಕೆಲವು ಉದ್ದಿ ಮೆಯ ನಷ್ಟವನ್ನು ತೋರಿಸಿ ಸಾಲವನ್ನೇ ಮರುಪಾವತಿಸದ ಬಂಡವಾಳ ಶಾಹಿಗಳ ಸಂಖ್ಯೆಯೇ ನಮ್ಮ ದೇಶದಲ್ಲಿ ದೊಡ್ಡದಿದೆ. ಇಲ್ಲಿ ಆಗಿರುವ ನಷ್ಟವನ್ನು ರೈತರಿಗೆ ನೀಡುವ ಸಾಲದ ಬಡ್ಡಿದರವನ್ನು ಏರಿಸಿ ಸರಿದೂಗಿಸಲಾಗುತ್ತಿದೆ. ಆ ಮೂಲಕ ಬ್ಯಾಂಕ್‌ಗಳನ್ನು ಲೂಟಿ ಮಾಡಲು ಸರಕಾರ ಉದ್ದಿಮೆ ಕಂಪೆನಿಗಳಿಗೆ ಸಹಕರಿಸುತ್ತಿದೆ ಎಂದು ಅವರು ಆರೋಪಿಸಿದರು.
ನಷ್ಟದ ಸಬೂಬು ನೀಡಿ ಕೈಗಾರಿಕೋದ್ಯಮಿಗಳು ತೆಗೆದುಕೊಂಡ ಸಾಲ ಮರುಪಾವತಿಸದೆ ಆಗಿರುವ ಅನುತ್ಪಾದಿತ ಸೊತ್ತು ಸುಮಾರು 68 ಸಾವಿರ ಕೋಟಿ ರೂ.ಗೂ ಅಧಿಕವಾಗಿದೆ. ಆದರೆ ಸರಕಾರ ಶೇ.10ರಷ್ಟು ವೇತನ ಇತ್ಯರ್ಥಕ್ಕೆ ಮೀನಾ ಮೇಷ ಎಣಿಸುತ್ತಿದೆ ಎಂದು ಅವರು ಆರೋಪಿಸಿದ ಅವರು, ನ.24ರಿಂದ ಪ್ರಾರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನದಲ್ಲಿ ವೇತನ ಇತ್ಯರ್ಥ (ವೇಜ್ ಸೆಟ್ಲ್‌ಮೆಂಟ್) ಕುರಿತು ವಿಷಯ ಪ್ರಸ್ತಾಪಿಸಲಾಗುವುದು ಭರವಸೆ ನೀಡಿದರು.

ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಆರ್ಥಿಕ ಅಸ್ಥಿರತೆ ಉಂಟಾಗಿದ್ದರೂ ಭಾರತದ ಆರ್ಥಿಕ ಸ್ಥಿತಿ ಸ್ಥಿರವಾಗಿತ್ತು. ಇದಕ್ಕೆ ಆಗಿನ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್‌ರ ಆರ್ಥಿಕ ನೀತಿಯಿಂದ ಸ್ಥಿರತೆ ಸಾಧ್ಯವಾಯಿತು ಎಂದು ಕಾಂಗ್ರೆಸಿಗರು ಹೋಗಳಿಕೊಂಡರು. ಆದರೆ ಮನಮೋಹನ್ ಸಿಂಗ್ ತಪ್ಪು ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆದದ್ದು ಆಗ ಯುಪಿಎ ಸರಕಾರವನ್ನು ಬೆಂಬಲಿಸಿದ್ದ ಎಡಪಕ್ಷಗಳು. 1971-72ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಸರಕಾರಕ್ಕೆ ಬೆಂಬಲಿಸಿದ್ದ ಅವಧಿಯಲ್ಲೂ ಬ್ಯಾಂಕಿಂಗ್ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು. ನಮ್ಮ ಷರತ್ತಿನ ಕಾರಣದಿಂದಾಗಿ ಬ್ಯಾಂಕ್‌ಗಳ ರಾಷ್ಟ್ರೀಕರಣವಾಯಿತು. ದೇಶದ ಇಂದಿನ ಆರ್ಥಿಕ ಸ್ಥಿರತೆಗೆ ರಾಷ್ಟ್ರೀಕರಣದ ಪಾತ್ರ ಮಹತ್ವದ್ದು ಎಂಬುದನ್ನ್ನು ಮರೆಯುವಂತಿಲ್ಲ ಎಂದು ಹೇಳಿದರು.

Befi_news_photo_3 Befi_news_photo_4

ಭಾರತದಲ್ಲಿ ಕೇವಲ 55 ಮಂದಿ ಬಿಲಿಯನೇರ್‌ಗಳಿಂದ ಒಟ್ಟು ಆಂತರಿಕ ಉತ್ಪನ್ನದ ಮಟ್ಟಕ್ಕೆ ಶೇ.50 ಕೊಡುಗೆಯಾಗುತ್ತಿದೆ. ಆದರೆ ದೇಶದಲ್ಲಿ ಇನ್ನೂ 80 ಕೋಟಿಗೂ ಅಧಿಕ ಮಂದಿ ದಿನಕ್ಕೆ 20 ರೂ.ಗಿಂತಲೂ ಕಡಿಮೆ ವೇತನದಲ್ಲಿ ಬದುಕುತ್ತಿದ್ದಾರೆ ಎಂದು ಅವರು ತಿಳಿಸಿದರು.

ಬಿಇಎ್ಐ- ಕರ್ನಾಟಕದ ಅಧ್ಯಕ್ಷ ಕೆ. ಶ್ರೀನಿವಾಸ ಬಾಬು ಅಧ್ಯಕ್ಷತೆ ವಹಿಸಿದ್ದರು. ಐಸಿಇಯು (ಎಐಐಇಎ) ಬೆಂಗಳೂರು ಇದರ ಪ್ರ. ಕಾರ್ಯದರ್ಶಿ ಎಸ್. ಕೆ. ಗೀತಾ ಅತಿಥಿಯಾಗಿದ್ದರು. ಸಿಐಟಿಯು ಪ್ರ.ಕಾರ್ಯದರ್ಶಿ ವಸಂತ ಆಚಾರಿ, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ಬಿ.ಎಂ. ಮಾಧವ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಬಿ.ಜಯ ಭಂಡಾರಿ ಸ್ವಾಗತಿಸಿದರು.

ಮೇಕ್ ಇನ್ ಇಂಡಿಯಾ ದೇಶ ಕೊಳ್ಳೆ ಒಡೆಯಲು ವಿದೇಶಿಯರಿಗೆ ಆಮಂತ್ರಣ
ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಸ್ವದೇಶಿ ನೀತಿ ಬೋಧಿಸುತ್ತಾರೆ. ವಿದೇಶಕ್ಕೆ ಹೋಗಿ ‘ಮೇಕ್ ಇನ್ ಇಂಡಿಯಾ’ ಎಂಬುದಾಗಿ ವಿದೇಶಿ ಬಂಡವಾಳಶಾಹಿಗಳಿಗೆ ಮುಕ್ತ ಆಮಂತ್ರಣ ನೀಡುತ್ತಾರೆ. ಸ್ವದೇಶ ಮತ್ತು ವಿದೇಶದಲ್ಲಿ ಮಾತನಾಡುವಾಗ ಅವರು ದ್ವಂದ್ವ ನಿಲುವು ಪ್ರಕಟಿಸುತ್ತಾರೆ ಎಂದು ಸೀತಾರಾಮ್ ಯೆಚೂರಿ ಆರೋಪಿಸಿದರು.

Befi_news_photo_5 Befi_news_photo_6

ಮೇಡ್ ಇನ್ ಇಂಡಿಯಾ ಎಂದರೆ ವಿದೇಶಿಯ ಸಂಪನ್ಮೂಲವನ್ನು ತಂದು ಭಾರತದಲ್ಲಿ ಸಿದ್ಧ ಪಡಿಸಿ ಭಾರತದಲ್ಲಿಯೇ ಮಾರಿ ಎಂಬುದಾಗಿದೆ. ಮೇಕ್ ಇನ್ ಇಂಡಿಯಾ ಎಂದರೆ ಭಾರತೀಯ ಖನಿಜ, ಭಾರತೀಯ ಸಂಪನ್ಮೂಲಗಳನ್ನು ಬಳಸಿ ಅದನ್ನು ಬೇಕಿದ್ದರೆ ವಿದೇಶಕ್ಕೆ ತೆಗೆದುಕೊಂಡು ಹೋಗಿ ಎಂಬುದಾಗಿದೆ. ಭಾರತದ ಸಂಪನ್ಮೂಲ ಕೊಳ್ಳೆ ಹೊಡೆಯಲು ನರೇಂದ್ರ ಮೋದಿ ವಿದೇಶಿ ಬಂಡವಾಳ ಶಾಹಿಗಳಿಗೆ ಮುಕ್ತ ಆಹ್ವಾನ ನೀಡುತ್ತಿದ್ದಾರೆ ಎಂದು ಯೆಚೂರಿ ಆರೋಪಿಸಿದರು. ನರೇಂದ್ರ ಮೋದಿಯ ಇಂತಹ ನೀತಿಗಳಿಂದ ಸಾರ್ವಜನಿಕ ರಂಗದ ಹಾಗೂ ಸಹಕಾರಿ ರಂಗದ ಸಂಸ್ಥೆಗಳಿಗೆ ಸಮಸ್ಯೆಯಾಗಲಿದೆ ಎಂದ ಅವರು, ವಿದೇಶಿ ಬಂಡವಳಾಶಾಹಿಗಳಿಗೆ ವಿದೇಶಿ ಸರಕುಗಳಿಗೆ ಅವಕಾಶ ನೀಡಿದರೆ, ಇಲ್ಲಿನ ಕೃಷಿ ಮುಂತಾದ ರಂಗಕ್ಕೆ ಸಿಗುತ್ತಿರುವ ಸಹಾಯಧನಕ್ಕೆ ಅಡ್ಡಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿ ಯಾವುದೇ ಯೋಜನೆ ಅನುಷ್ಠಾನಗೊಂಡರೂ ಅದನ್ನು ಪ್ರಧಾನಿ ನರೇಂದ್ರ ಮೋದಿಯೇ ಮೊದಲ ಬಾರಿಗೆ ಮಾಡಿದ್ದು ಎಂಬಂತೆ ಬಿಂಬಿಸಲಾಗುತ್ತಿದೆ. ಪ್ರಧಾನಿ ದೇಶದ ಪ್ರಧಾನ ಸೇವಕ ಎಂಬುದನ್ನು ಜವಾಹರ ಲಾಲ್ ನೆಹರೂ ಅವರು ಈ ಹಿಂದೆಯೇ ಹೇಳಿದ್ದರು. ಆದರೆ ನರೇಂದ್ರ ಮೋದಿ ಇದನ್ನು ತಾನೇ ಮೊದಲ ಬಾರಿಗೆ ಇದನ್ನು ಹೇಳಿದಂತೆ ಪ್ರಚಾರ ಮಾಡಿದರು. ನರೇಂದ್ರ ಮೋದಿಯ ಕಾರ್ಯ ವೈಖರಿ ಹೇಗಿದೆ ಎಂದರೆ ನನಗಿಂತ ಮೊದಲು ಯಾರೂ ಒಳ್ಳೆಯ ಕೆಲಸವನ್ನೇ ಮಾಡಿಲ್ಲ. ನನ್ನ ಬಳಿಕವೂ ಒಳ್ಳೆಯ ಕೆಲಸ ಮಾಡುವವರು ಬರುವುದಿಲ್ಲ ಎಂಬಂತಿದೆ ಎಂದು ಯೆಚೂರಿ ಅಸಮಾಧಾನ ವ್ಯಕ್ತಪಡಿಸಿದರು.

Write A Comment