ಮಂಗಳೂರು: ಮಂಗಳೂರು ಬಳಿಯ ಜೋಕಟ್ಟೆಯಲ್ಲಿರುವ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂ.ಆರ್.ಪಿ.ಎಲ್) ಕೋಕರ್ ಹೈಡ್ರೋಟ್ರೀಟರ್(ಸಿ.ಎಚ್.ಟಿ) ಘಟಕದಲ್ಲಿ ಬುಧವಾರ ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಒಬ್ಬರು ಮೃತಪಟ್ಟು 8 ಮಂದಿ ಗಾಯಗೊಂಡಿದ್ದಾರೆ.

ಮೃತರನ್ನು ಮುಲ್ಕಿ ನಿವಾಸಿ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮನೀಶ್ ಕರ್ಕರ(30) ಎಂದು ಗುರುತಿಸಲಾಗಿದೆ. ಅವರ ಮೃತದೇಹ ಸುಟ್ಟ ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಹೈಡ್ರೋ ಸಲ್ಫರ್ ಟ್ರೀಟ್ಮೆಂಟ್ ಘಟಕದಲ್ಲಿ ಬಾಯ್ಲರ್ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ದೊಡ್ಡ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಅದನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಹೇಳಿದ್ದಾರೆ.
ಶೇ. 35 ರಷ್ಟು ಸುಟ್ಟ ಗಾಯಗಳನ್ನು ಹೊಂದಿದ್ದ ಉದ್ಯೋಗಿ ರಾಜೇಶ್ ಬ್ಯಾಪ್ಟಿಸ್ಟ್ ಅವರನ್ನು ಶ್ರೀನಿವಾಸ ಆಸ್ಪತ್ರೆಗೆ ಸ್ಥಳಾಂತರಿಸಿ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪಕ್ಕದ ಕಚೇರಿಯಲ್ಲಿದ್ದ ಇತರ ಏಳು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೊರರೋಗಿಗಳಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೋಕರ್ ಹೈಡ್ರೋಟ್ರೀಟರ್ ಘಟಕದಲ್ಲಿ ಸುಮಾರು 70 ಬಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೋಲ್ಡ್ ಸಪರೇಟರ್ ಒಡೆದು ಬೆಂಕಿ ಕಾಣಿಸಿಕೊಂಡು ಈ ಘಟನೆ ಸಂಭವಿಸಿದೆ ಎಂದು ಎಂ.ಆರ್.ಪಿ.ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ಬಳಿಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿತ್ತು.
Comments are closed.