ಮಂಗಳೂರು: ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಶತಮಾನೋತ್ಸವ ಸಂಭ್ರಮವು ಮಂಗಳೂರಿನ ಟಿ.ಎಂ.ಎ ಪೈ ಕನ್ವೆನ್ಷನ್ ಸೆಂಟರ್ನಲ್ಲಿ ರವಿವಾರ ನಡೆದಿದ್ದು ಮಧ್ಯಾಹ್ನ ವೇದಿಕೆಯಲ್ಲಿ ‘ಶತಮಾನದ ಪರಂಪರೆ ಸೊಬಗು ಭವಿಷ್ಯದ ಚೈತನ್ಯದ ಮೆರಗು’ ಕಾರ್ಯಕ್ರಮ ನಡೆಯಿತು.

ದುಬೈನ ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ಟ್ರೇಡಿಂಗ್ ಎಲ್.ಎಲ್.ಸಿ. ಸಂಸ್ಥೆಯ ಅಂಶುಲ್ ಹರೀಶ್ ಶೇರಿಗಾರ್ ಮಾತನಾಡಿ, ಉದ್ಯಮದಲ್ಲಿ ಸಾಧನೆ ಮಾಡಲು ತಂದೆ ಹರೀಶ್ ಶೇರಿಗಾರ್ ತಾಯಿ ಶರ್ಮಿಳಾ ಶೇರಿಗಾರ್ ಅವರ ಮಾರ್ಗದರ್ಶನ ಹಾಗೂ ಬೆಂಬಲ ಬಹಳಷ್ಟು ಸಹಕಾರಿಯಾಗಿದೆ. ಯುವ ಜನರು ಜೀವನದಲ್ಲಿ ಬೆಳೆಯಲು ಒಂದಷ್ಟು ಸೂತ್ರ ಅಳವಡಿಸಿಕೊಳ್ಳಬೇಕು. ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ಮೂಲಭೂತ ವಿಷಯಗಳಿಂದ ಕಲಿಯಬೇಕು. ತಳಮಟ್ಟದಿಂದ ಪ್ರಾರಂಭಿಸಲು ಹಿಂಜರಿಯಬಾರದು. ಸಣ್ಣ ಕೆಲಸಗಳನ್ನು ಮಾಡಲು ಹಿಂದೇಟು ಹಾಕಬಾರದು ಮತ್ತು ತಿರಸ್ಕಾರಕ್ಕೆ ಹೆದರಬಾರದು. ಮುಖ್ಯವಾಗಿ, ಮೊದಲ ಹೆಜ್ಜೆ ಇಡಲು ಹಿಂಜರಿಯದಿರಿ, ಏಕೆಂದರೆ ಕೆಲವೊಮ್ಮೆ ನಿಮ್ಮ ತಲೆಯಲ್ಲಿ ಅತ್ಯಂತ ಕಷ್ಟಕರವೆಂದು ತೋರುವ ವಿಷಯಗಳು ನೀವು ನಿಜವಾಗಿಯೂ ಅವುಗಳನ್ನು ಮಾಡಲು ಪ್ರಾರಂಭಿಸಿದ ನಂತರ ಅತ್ಯಂತ ಸುಲಭವಾಗುತ್ತವೆ. ಕಷ್ಟಪಟ್ಟು ಕೆಲಸ ಮಾಡಿ, ಗುರುಹಿರಿಯರಿಗೆ ವಿನಮ್ರರಾಗಿರಬೇಕು. ಕಲಿಯುತ್ತಲೇ ಇರಿ, ತಾಳ್ಮೆ ಅಗತ್ಯ. ಯಶಸ್ಸು ರಾತ್ರೋರಾತ್ರಿ ಸಂಭವಿಸುವುದಿಲ್ಲ. ಪ್ರತಿಯೊಂದು ಅನುಭವ, ಪ್ರತಿಯೊಂದು ತಪ್ಪು, ಪ್ರತಿಯೊಂದು ನಿರಾಕರಣೆ ಮತ್ತು ಪ್ರತಿಯೊಂದು ಸವಾಲು ನಿಮಗೆ ಮುಂದುವರಿಯಲು ಸಹಾಯ ಮಾಡುವದನ್ನು ಕಲಿಸುತ್ತದೆ ಎಂದು ಯುವ ಜನಾಂಗಕ್ಕೆ ಕರೆ ನೀಡಿದರು.
ನಾನು ದುಬೈನ ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದಿಂದ ವ್ಯವಹಾರ ಮತ್ತು ಹಣಕಾಸು ವಿಷಯದಲ್ಲಿ ಪದವಿ ಪಡೆದಿದ್ದು ಉನ್ನತ ವ್ಯಾಸಂಗಕ್ಕಾಗಿ ಯುಕೆಗೆ ಹೋಗುವುದಾಗಿತ್ತು. ಆದಾಗ್ಯೂ, ನನ್ನ ತಂದೆ ನಾನು ಅವರೊಂದಿಗೆ ಮೊದಲು ಸ್ವಲ್ಪ ಕೆಲಸದ ಅನುಭವವನ್ನು ಪಡೆಯಲು ಹೇಳಿದ್ದು ಆದ್ದರಿಂದ ನಾನು ವಿದೇಶಕ್ಕೆ ಹೋಗುವ ಮೊದಲು ಸ್ವಲ್ಪ ಪ್ರಾಯೋಗಿಕ ಜ್ಞಾನವನ್ನು ಪಡೆದೆ. ನನ್ನ ತಂದೆ ಬಹಳಷ್ಟು ಮಾರ್ಗದರ್ಶನ ನೀಡಿದರು. ನಾನು ವ್ಯವಹಾರವನ್ನು ಮೂಲಜ್ಞಾನ ಕಲಿಯಬೇಕೆಂದು ತಂದೆ ಬಯಸಿದ್ದರು. ಅವರು ಆರಂಭದಲ್ಲಿ ನನ್ನನ್ನು ಒಂದು ತಿಂಗಳು ಗೋದಾಮಿನಲ್ಲಿ ಕೆಲಸ ಮಾಡುವಂತೆ ತಿಳಿಸಿದ್ದರಿಂದ ವ್ಯವಹಾರ ಜ್ಞಾನ ಕಲಿತೆ. ಇನ್ವಾಯ್ಸಿಂಗ್, ಡೇಟಾ ಎಂಟ್ರಿ, ಪಾವತಿ ಸಂಗ್ರಹಣೆಗಳ ಅನುಸರಣೆ ಮತ್ತು ಮುಂತಾದವುಗಳಲ್ಲಿ ಕೆಲಸ ಮಾಡಿದೆ. ಮಾರ್ಕೆಟಿಂಗ್ ವಿಚಾರದಲ್ಲಿ ಹಲವು ಬಾರಿ ನಿರಾಶೆಗೊಂಡರೂ ಕೂಡ ಪ್ರಯತ್ನಿಸುವುದನ್ನು ನಿಲ್ಲಿಸಲಿಲ್ಲ. ನನ್ನ ತಂದೆಯ ಹಠ, ಶ್ರಮ, ಸಾಧನೆಯು ನಿರಂತರವಾಗಿ ಮುಂದುವರಿಸಲು ಪ್ರೇರೇಪಿಸಿತು. ಇಂದು, ನನ್ನದೇ ಆದ ನಿಷ್ಠಾವಂತ ಗ್ರಾಹಕರು ನಮ್ಮೊಂದಿಗಿದ್ದಾರೆ. ನಾನು ಎಂದಿಗೂ ತೃಪ್ತನಾಗಿರಲಿಲ್ಲ. ನಾನು ಹೆಚ್ಚಿನದನ್ನು ಮಾಡಲು ಬಯಸಿದ್ದೆ. ಈ ವರ್ಷ ನನ್ನ ತಂದೆ ಮತ್ತು ಟ್ರಸ್ಟ್ನ ಬೆಂಬಲದೊಂದಿಗೆ, ನಾನು ಯುಎಇ ಮಾರುಕಟ್ಟೆಯಲ್ಲಿ ಒಂದು ಮಾರುಕಟ್ಟೆ ಸ್ಥಾನವನ್ನು ಗುರುತಿಸಲು ಸಾಧ್ಯವಾಯಿತು ಮತ್ತು ಮೆಲಮೈನ್ ಎಂಡಿಎಫ್ ತಯಾರಿಕೆಯಲ್ಲಿ ಅಕ್ಮೆ ತನ್ನ ಮುಂದಿನ ಹೆಜ್ಜೆಯಿಟ್ಟಿದೆ ಎಂದರು.
ಸೃಷ್ಟಿ ಇನ್ಫೋಟೈನ್ಮೆಂಟ್ ಪ್ರೈ. ಲಿ. ಎಂಡಿ ಮತ್ತು ವಿಜಯ ಟೈಮ್ಸ್ ಮುಖ್ಯ ಸಂಪಾದಕಿ ವಿಜಯಲಕ್ಷ್ಮಿ ಶಿಬರೂರು ಮಾತನಾಡಿ, ಈ ಸುಂದರ ಕ್ಷಣದ ಅವಲೋಕನವಾಗಬೇಕು. ದೇವಾಡಿಗ ಸಮುದಾಯ ಸಂಘಕಟ್ಟಿ 100 ವರ್ಷವಾಗಿದ್ದು ಮಾಡಿದ್ದ ಸಾಧನೆ ತೃಪ್ತಿ ತಂದಿದೆಯೇ ಎಂಬ ಆತ್ಮಾವಲೋಕನಾ ಮಾಡಬೇಕಿದೆ. ಬೇರೆ ಸಮಾಜಕ್ಕೆ ಹೋಲಿಸಿದರೆ ಸಾಧನೆ ಸಾಲದು. ಮುಂದಿನ ನೂರು ವರ್ಷದಲ್ಲಾದರೂ ಮಹತ್ತರ ಸಾಧನೆಯಾಗಬೇಕಾದರೆ ಯುವ ಜನಾಂಗದಿಂದ ಸಾಧ್ಯವಿದೆ. ನಮ್ಮ ಯುವ ಸಮುದಾಯ ಸಾಧನೆಗೆ ಸಿದ್ದವಿದೆಯೇ ಆತ್ಮವಿಶ್ವಾಸ, ಧೈರ್ಯ ಇದೆಯಾ ಎಂಬುದನ್ನು ಅವಲೋಕಿಸಬೇಕು. ಮೌಲ್ಯಗಳು ವ್ಯಾವಹಾರೀಕರಣವಾಗಿದೆ. ಮೌಲ್ಯಾಧಾರಿತ ಜೀವನ ಕ್ರಮಅಳವಡಿಸಿಕೊಳ್ಳಬೇಕು. ಆತ್ಮವಿಶ್ವಾಸದ ಕೀಳರಿಮೆಯನ್ನು ಯುವಕರು ಬಿಡಬೇಕು. ಕೀಳರಿಮೆ ಇದ್ದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ನಮ್ಮ ನೆಲದ ವಾಸನೆ, ಮೂಲ ಸಂಸ್ಕೃತಿಯನ್ನು ಮರೆಯಬಾರದು. ರೀಲ್ಸ್, ಆಪ್ ಹುಚ್ಚಿಗೆ ಯುವಜನಾಂಗ ಬಲಿಯಾಗಬಾರದು. ಅನ್ಯಾಯದ ವಿರುದ್ಧ ಮಾತನಾಡುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು. ಯುವಕರು ಆರ್ಥಿಕವಾಗಿ ಬೆಳೆಯಬೇಕಾದರೆ ಹಿರಿಯರ ಸಹಕಾರ ಬೇಕು. ಹಿರಿಯರ ಅನುಭವ, ಯುವಕರ ಶಕ್ತಿ ಜೊತೆಯಾದಾಗ ಸಮಾಜದ ಬೆಳವಣಿಗೆ ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಡಾ. ಭಾವನಾ ಶೇರಿಗಾರ್, ಗಲ್ಫ್ ಪೈಪ್ಲೈನ್ ಟೆಸ್ಟಿಂಗ್ & ಇನ್ಸ್ಪೆಕ್ಷನ್ ದುಬೈ ಇಲ್ಲಿನ ವಿನೀತ್ ದೇವಾಡಿಗ ಕದ್ರಿ, ತುಳು-ಕನ್ನಡ ಚಲನಚಿತ್ರ ನಟ ವಿನೀತ್ ಕುಮಾರ್, ಟೈರೋಲಿಟ್ ಮಿಡಲ್ ಈಸ್ಟ್ ಎಫ್ಝಡ್ಇ, ಯುಎಇ ಭರತ್ ದಾಮೋದರ್, ದೇವಾಡಿಗ ಸಂಘ ಮುಂಬೈ ಜಂಟಿ ಕಾರ್ಯದರ್ಶಿ ಸಚಿತಾ ಶ್ರೀಯಾನ್, ಮುಂಬೈ ಸತ್ಯನಾರಾಯಣ ಇಂಡಸ್ಟ್ರೀಸ್ ಮುಂಬೈ ನಿರ್ದೇಶಕ ಪವನ್ ಡಿ. ದೇವಾಡಿಗ, ಯೂನಿಕ್ ಪ್ರೀಮೀಡಿಯಾ ಸೊಲ್ಯೂಷನ್ಸ್ ಪ್ರೈ.ಲಿ. ಆಡಳಿತ ನಿರ್ದೇಶಕ ತೇಜಸ್ ಸುಧಾಕರ್ ಕೆ., ಹಿರಿಯಡ್ಕ ಉಪಸಂಘದ ಅಧ್ಯಕ್ಷ ಎಚ್. ರಾಜೇಂದ್ರ ಕುಮಾರ್ ದೇವಾಡಿಗ, ಸುರತ್ಕಲ್ ಉಪಸಂಘದ ಅಧ್ಯಕ್ಷ ಯಶವಂತ್ ದೇವಾಡಿಗ, ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಯುವ ವಿಭಾಗದ ಅಧ್ಯಕ್ಷ ಸುಮಿತ್ ದೇವಾಡಿಗ, ಕಾರ್ಯದರ್ಶಿ ಅವಿನಾಶ್ ದೇವಾಡಿಗ ಮಹಿಳಾ ಸಂಘದ ಅಧ್ಯಕ್ಷೆ ಜ್ಯೋತಿ ಪ್ರವೀಣ್ ಇದ್ದರು.
ಜ್ಯೋತಿ ಸುನೀಲ್ ಸ್ವಾಗತಿಸಿದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.