ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (92) ಅವರು ನಿಧನರಾಗಿದ್ದಾರೆ. ಹೃದಯಾಘಾತದ ಹಿನ್ನೆಲೆ ಶನಿವಾರ ಆಶಾ ಭೋಸ್ಲೆ ಅವರನ್ನು ಮುಂಬೈನ ಬೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರವಿವಾರ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಆಶಾ ಭೋಸ್ಲೆ ಅವರು ವಿವಿಧ ಭಾರತೀಯ ಭಾಷೆಗಳಲ್ಲಿ 12 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ‘ಅಭಿ ನಾ ಜಾವೋ ಛೋಡ್ ಕರ್, ‘ದಿಲ್ ಚೀಜ್ ಕ್ಯಾ ಹೈ’; ‘ಪಿಯಾ ತೂ ಅಬ್ ತೋ ಆಜಾ, ‘ದುನಿಯಾ ಮೇ ಲೋಗೋನ್ ಕೋ’ ಸಹಿತ ಹಲವು ಹಾಡುಗಳು ಬಾರೀ ಜನಪ್ರಿಯಗೊಂಡಿದ್ದವು.
ಪದ್ಮ ವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಆಶಾ ಭೋಸ್ಲೆ ಅವರಿಗೆ ಸಂದಿವೆ.
ದಶಕಗಳ ಕಾಲ, ಮೀನಾ ಕುಮಾರಿ, ಮಧುಬಾಲಾ, ಜೀನತ್ ಅಮಾನ್, ಕಾಜೋಲ್ ಮತ್ತು ಊರ್ಮಿಳಾ ಮಾತೋಂಡ್ಕರ್ ಸೇರಿದಂತೆ ಹಲವು ಪೀಳಿಗೆಯ ಪ್ರಮುಖ ನಟಿಯರ ನೃತ್ಯಗಳಿಗೆ ಅವರು ಹಿನ್ನೆಲೆ ಗಾಯಕಿಯಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಪದ್ಮಿನಿ ಮತ್ತು ವೈಜಯಂತಿಮಾಲಾ ಮುಂತಾದ ದಕ್ಷಿಣ ಭಾರತೀಯ ನಟಿಯರಿಗೂ ಅವರು ಧ್ವನಿ ನೀಡಿದ್ದರು.
ಆಶಾ ಭೋಸ್ಲೆ ಅವರು ತಮ್ಮ 90ನೇ ಹುಟ್ಟುಹಬ್ಬದ ಅಂಗವಾಗಿ ದುಬೈನಲ್ಲಿ ‘ASHA@90: Live in concert’ ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ನಡೆಸಿದ್ದರು.
ಆಶಾ ಭೋಸ್ಲೆಯವರ ನಿಧನಕ್ಕೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು, ಬಾಲಿವುಡ್ ದಿಗ್ಗಜರು ಸಂತಾಪ ಸೂಚಿಸಿದ್ದಾರೆ.

Comments are closed.