UAE

ದುಬೈ ಏರ್ ಶೋ ವೇಳೆ ದುರಂತ; ಭಾರತದ ತೇಜಸ್ ಯುದ್ಧ ವಿಮಾನ ಪತನ, ಪೈಲಟ್ ಸಾವು

Pinterest LinkedIn Tumblr

ದುಬೈ: ವಿಶ್ವದ ಪ್ರತಿಷ್ಠಿತ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾದ ‘ದುಬೈ ಏರ್ ಶೋ’ನಲ್ಲಿ ಭಾರತದ ತೇಜಸ್ ಲಘು ಯುದ್ಧ ವಿಮಾನ ಪ್ರದರ್ಶನ ನೀಡುತ್ತಿದ್ದ ವೇಳೆ ಪತನಗೊಂಡಿದ್ದು, ಪೈಲಟ್ ಮೃತಪಟ್ಟಿದ್ದಾರೆ ಎಂದು ಭಾರತೀಯ ವಾಯುಪಡೆ (ಐಎಎಫ್) ಖಚಿತಪಡಿಸಿದೆ.

ದುಬೈನ ಅಲ್ ಮಕ್ತುಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ಸ್ಥಳೀಯ ಕಾಲಮಾನ ಮಧ್ಯಾಹ್ನ 2:10ಕ್ಕೆ ಈ ದುರಂತ ಸಂಭವಿಸಿದೆ.

ಭಾರತದ ದೇಶೀಯ ರಕ್ಷಣಾ ಉತ್ಪಾದನಾ ಸಾಮರ್ಥ್ಯಗಳನ್ನು ಪ್ರದರ್ಶಿಸಲು ತೇಜಸ್‌ ಈ ಜಾಗತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ʻದುಬೈ ಏರ್ ಶೋನಲ್ಲಿ ವೈಮಾನಿಕ ಪ್ರದರ್ಶನದ ವೇಳೆ ಐಎಎಫ್‌ನ ತೇಜಸ್ ವಿಮಾನ ಅಪಘಾತಕ್ಕೀಡಾಗಿದೆ. ದುರದೃಷ್ಟವಶಾತ್ ಪೈಲಟ್ ಸಾವನಪ್ಪಿದ್ದಾರೆ. ದುಃಖಿತ ಕುಟುಂಬಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಐಎಎಫ್ ಟ್ವೀಟ್‌ ಮಾಡಿದೆ.

ವಿಡಿಯೋದಲ್ಲಿ ಏನಿದೆ?: ದುಬೈ ಏರ್‌ ಶೋನಲ್ಲಿ ತೇಜಸ್‌ ಯುದ್ಧ ವಿಮಾನ ಪತನಗೊಂಡಿರುವ ಎಕ್ಸ್‌ನಲ್ಲಿ ವೈರಲ್‌ ಆಗಿದೆ. ವಿಡಿಯೋ ಪ್ರಕಾರ, ತೇಜಸ್‌ ಲಘು ಯುದ್ಧ ವಿಮಾನ ಆಗಸದಲ್ಲಿ ಪ್ರದರ್ಶನ ನೀಡುತ್ತಿದೆ. ಇದೇ ವೇಳೆ ತೇಜಸ್ ವಿಮಾನವು ಪ್ರದರ್ಶನ ನೀಡುತ್ತಿದ್ದಾಗ ವೇಗವಾಗಿ ಕೆಳಗೆ ಇಳಿಯಿತು. ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡು ಭಸ್ಮವಾಗಿದೆ. ದುರ್ಘಟನೆಯಲ್ಲಿ ಪೈಲಟ್‌ ಮೃತಪಟ್ಟಿದ್ದಾರೆ. ಇತ್ತ ಜನರು ಅಘಾತ ವ್ಯಕ್ತಪಡಿಸಿ, ಚೀರಾಡುವುದು ಕೇಳಿಸುತ್ತದೆ.

ಇದು ಎರಡು ವರ್ಷಗಳ ಅವಧಿಯಲ್ಲಿ ಸಂಭವಿಸಿದ ಎರಡನೇ ಘಟನೆಯಾಗಿದೆ. ಮಾರ್ಚ್ 2024ರಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ತೇಜಸ್ ಯುದ್ಧ ವಿಮಾನ ಪತನಗೊಂಡವಾದ ಬಗ್ಗೆ ವರದಿಯಾಗಿತ್ತು. 2001ರ ಮೊದಲ ಪರೀಕ್ಷಾರ್ಥ ಹಾರಾಟದ ನಂತರ ನಡೆದ ಮೊದಲ ಪತನ ಇದಾಗಿತ್ತು. ಆದರೆ ಆ ಘಟನೆಯಲ್ಲಿ ಪೈಲಟ್ ಸುರಕ್ಷಿತವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಎಚ್‌ಎಎಲ್‌ನೊಂದಿಗೆ 97 ಹೆಚ್ಚುವರಿ ತೇಜಸ್ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು, 2027ರಿಂದ ವಿತರಣೆ ಆರಂಭವಾಗುವ ನಿರೀಕ್ಷೆಯಿದೆ.

ತೇಜಸ್‌ ವಿಮಾನದ ವಿಶೇಷತೆ ಏನು: ತೇಜಸ್‌ 4.5ನೇ ತಲೆಮಾರಿನ ಸೂಪರ್‌ಸಾನಿಕ್‌ ಸಾಮರ್ಥ್ಯದ ಒಂದೇ ಎಂಜಿನ್‌ ಹೊಂದಿರುವ, ಲಘು ತೂಕದ, ಮತ್ತು ಬಹು-ಪಾತ್ರದ ಯುದ್ಧ ವಿಮಾನವಾಗಿದೆ. ಸುಮಾರು ನಾಲ್ಕು ಸಾವಿರ ಕೆ.ಜಿ.ವರೆಗೆ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಹಾರಾಟದ ಮಧ್ಯದಲ್ಲೇ ಇಂಧನವನ್ನು ತುಂಬಿಸಿಕೊಳ್ಳುವ ಸಾಮರ್ಥ್ಯವೂ ಇದಕ್ಕಿದೆ.

Comments are closed.