Karnataka

1 ವರ್ಷ 9 ತಿಂಗಳ ಪುಟಾಣಿ ಕಂದಮ್ಮ ಪಡುಕೋಣೆ ಮೂಲದ ಹನ್ವಿಕಾ ಎಸ್. ದೇವಾಡಿಗರ ಅಪರೂಪದ ಸಾಧನೆಗೆ ‘ಸೂಪರ್ ಟ್ಯಾಲೆಂಟೆಡ್ ಕಿಡ್’ ಪ್ರಶಸ್ತಿ

Pinterest LinkedIn Tumblr

(ವರದಿ: ಯೋಗೀಶ್ ಕುಂಭಾಸಿ)

ಕುಂದಾಪುರ: 2 ವರ್ಷದೊಳಗಿನ ಪುಟಾಣಿ ಕಂದಮ್ಮ ವಿಶ್ವ ಹಾಗೂ ರಾಜ್ಯ ಮಟ್ಟದಲ್ಲಿ ‘ಸೂಪರ್ ಟ್ಯಾಲೆಂಟೆಡ್ ಕಿಡ್’ ಪ್ರಶಸ್ತಿ ಮುಡಿಗೇರಿಸಿಕೊಂಡು ಸಾಧನೆ ಮಾಡಿದ್ದು ಆಕೆಯ ವಿಶೇಷ ಆಸಕ್ತಿಗೆ ಪೋಷಕರು ಪ್ರೋತ್ಸಾಹಿಸಿ ಆಕೆಯ ಸುಪ್ತ ಪ್ರತಿಭೆಯನ್ನು ಹೊರತಂದಿದ್ದಾರೆ.

ಪಡುಕೋಣೆ‌ ಮೂಲದ ಬೆಂಗಳೂರಿನಲ್ಲಿ ವ್ಯವಹಾರ ಮಾಡಿಕೊಂಡಿರುವ ಸಚೀಂದ್ರ ಆರ್. ದೇವಾಡಿಗ ಹಾಗೂ ಗೃಹಿಣಿ ಶ್ವೇತಾ ದೇವಾಡಿಗರ ಪುತ್ರಿ ಹನ್ವಿಕಾ ಎಸ್. ದೇವಾಡಿಗ 1 ವರ್ಷ 6 ತಿಂಗಳು ಇರುವಾಗಲೇ 15 ವಿಭಾಗಗಳಲ್ಲಿ ಸಾಧನೆ ಮಾಡಿ ಇಂಟರ್‌ನ್ಯಾಶನಲ್ ವರ್ಲ್ಡ್ ಎಕ್ಸಲೆನ್ಸ್- ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪಡೆದಿದ್ದು ಇದೀಗ 1.9 ವರ್ಷವಾಗುವಾಗ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪಡೆದಿದ್ದಾರೆ.

ಕುಟುಂಬಿಕರ ಪ್ರೋತ್ಸಾಹ: ಹನ್ವಿಕಾ 7 ತಿಂಗಳು ಇರುವಾಗಲೇ ಕೆಲವೊಂದು ಮಾತುಗಳಿಗೆ ಕೈ ಸನ್ನೆ, ಬಾಯ್ಸನ್ನೆ ಮೂಲಕ ಪ್ರತಿಕ್ರಿಯಿಸುವುದನ್ನು ಪೋಷಕರು ಗಮನಿಸಿದ್ದಾರೆ. ಹಾಗೆಯೇ ಅವಳಲ್ಲಿ ವಿಶೇಷವಾದ ಸ್ಮರಣ ಶಕ್ತಿ ಇರುವುದು ಅರಿತು, ಬೆರೆತು ಅವಳನ್ನು ಪ್ರೋತ್ಸಾಹಿಸುತ್ತಾ ಬಂದರು. ಕ್ರಮೇಣ ಅವಳಲ್ಲಿ ಆಸಕ್ತಿ ಹೆಚ್ಚುತ್ತಾ ಹೋದಂತೆ ಇದನ್ನು ಅರಿತ ಅಮ್ಮ, ಅಜ್ಜ, ಅಜ್ಜಿ ಅವಳನ್ನು ಮತ್ತಷ್ಟು ಪ್ರೋತ್ಸಾಹಿಸಿ ಪ್ರತಿಯೊಂದು ತಿಳಿಸುವುದರ ಮೂಲಕ ಅವಳ ಪ್ರತಿಕ್ರಿಯೆ ಗಮನಿಸಿದರು. ಅವಳಿಗೆ ಅಘಾದವಾದ ಆಸಕ್ತಿ ಇರುವುದು ಕಂಡುಬಂದಿದ್ದರಿಂದ ಎಲ್ಲವನ್ನು ತಿಳಿಸುವ ಕಾರ್ಯ ಮಾಡಿದರು. ಆದರೆ ಅವಳಿಗೆ ತರಬೇತಿ ಅಗತ್ಯವಿರಲಿಲ್ಲ ಒಂದು ಬಾರಿ ಹೇಳಿ ಮರುದಿನ ಕೇಳಿದರು ಅದನ್ನು ಥಟ್ ಎಂದು ತನ್ನ ತೊದಲು ನುಡಿಯಲ್ಲೇ ಹೇಳುವುದು ಕಂಡು ಸಂಪೂರ್ಣ ಕುಟುಂಬ ಆಕೆಗೆ ಪ್ರೋತ್ಸಾಹ ನೀಡಿತು.

ಪುಟಾಣಿಯ ಸಾಧನೆ: ಇನ್ನೂ ಎರಡು ವರ್ಷ ತುಂಬದ ಪುಟಾಣಿ ಹನ್ವಿಕಾ 30ಕ್ಕೂ ಹೆಚ್ಚು ತರಕಾರಿಗಳು ಗುರುತಿಸುವುದು, 40ಕ್ಕೂ ಹೆಚ್ಚು ಪ್ರಾಣಿಗಳನ್ನು ಗುರುತಿಸುವುದು ಹಾಗೆ 20ಕ್ಕೂ ಹೆಚ್ಚು ವಾಹನಗಳು, 30ಹಣ್ಣುಗಳು, 11 ಮೇಕ್‌ಅಪ್ ಪ್ರಾಡಕ್ಟ್‌ಗಳು, 20 ದೇಹದ ಭಾಗಗಳು, 30ಪಕ್ಷಿಗಳು, 9 ವಿವಿಧ ಬಟ್ಟೆಗಳು, 10 ಭಾವನೆಗಳನ್ನು ವ್ಯಕ್ತಪಡಿಸುವುದು, 100ಕ್ಕಿಂತ ಜಾಸ್ತಿ ಶಬ್ದವನ್ನು ಪುನರಾವರ್ತಿಸುವುದು, ಅ- ಅಃ, ಎ-ಝಡ್ ಪುನರಾವರ್ತಿಸಿ ದಾಖಲೆ ಮಾಡಿದ್ದಾಳೆ. ಹಾಗೆಯೇ ಈ ವಯಸ್ಸಲ್ಲಿ ಯಾರೂ ಎತ್ತಿತರದ ಭಾರವನ್ನು ಎತ್ತಿದ  ಮಗು ಎಂದು ಗುರುತಿಸಲಾಗಿದೆ. ಲೆಮನ್ ಅಂಡ್ ಸ್ಫೂನ್ ಕೇವಲ 1 ನಿಮಿಷ 25 ಸೆಕೆಂಡ್ ಗಳಲ್ಲಿ  125 ಮೀಟರ್ ಅತಿ ವೇಗವಾಗಿ ನಡೆದುಕೊಂಡು ಈ ಪುಟಾಣಿ ಬ್ಯಾಲೆನ್ಸ್ ಮಾಡಿದ್ದಾಳೆ.

ಸಣ್ಣ ವಯಸ್ಸಿನಲ್ಲಿ ಹನ್ವಿಕಾ ನಮ್ಮ ಜೊತೆ ಮಾಡುತ್ತಿದ್ದ ಸಂವಹನ ಪ್ರಕ್ರಿಯೆ, ಆಕೆಯ ಗೃಹಿಕಾ ಸಾಮರ್ಥ್ಯ ಕಂಡು ನಾವು ಅಚ್ಚರಿಯಾದೆವು. ಅವಳ ಸಾಧನೆಗೆ ಇಡೀ ಕುಟುಂಬ ಪ್ರೋತ್ಸಾಹಿಸಿದೆವು. ಹೀಗಾಗಿ ಅವಳಿಗಿದ್ದ ವಿಶೇಷ ಸಾಮರ್ಥ್ಯಕ್ಕೆ 1 ವರ್ಷ 9 ತಿಂಗಳೊಳಗೆ ಎರಡು ಪ್ರಮುಖ ಪ್ರಶಸ್ತಿಗಳು ದೊರಕಿದ್ದು ಸಂತಸವಾಗಿದೆ.– ಶ್ವೇತಾ ದೇವಾಡಿಗ (ಹನ್ವಿಕಾ ಎಸ್. ದೇವಾಡಿಗ ತಾಯಿ)

ನನ್ನ ಮಗಳು ಹನ್ವಿಕಾ 1 ವರ್ಷ 9 ತಿಂಗಳಿನಲ್ಲೇ ವಿಶ್ವ ಮತ್ತು ರಾಜ್ಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆಂದು ತುಂಬಾ ಹೆಮ್ಮೆ ಎನಿಸುತ್ತದೆ. ಅವಳ ಅರ್ಹತೆ ಗಮನಿಸಿ ಇಂಟರ್ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮತ್ತು ಕರ್ನಾಟಕ ಬುಕ್ ಆಫ್ ರೆಕಾರ್ಡ್ ಹೋಲ್ಡರ್ ಎಂಬ ಎರಡು ಪ್ರಶಸ್ತಿ ಪಡೆದು ವಿಶ್ವ ದಾಖಲೆ ಮಾಡಿರುವುದು ನಿಜಕ್ಕೂ ನಮ್ಮ ಕುಟುಂಬಕ್ಕೆ ಹೆಮ್ಮೆಯ ಸಂಗತಿ.- ಸಚೀಂದ್ರ ಆರ್. ದೇವಾಡಿಗ (ಹನ್ವಿಕಾ ತಂದೆ)

Comments are closed.