ಕರಾವಳಿ

ಗಂಗೊಳ್ಳಿ: ದೋಣಿ ಮಗುಚಿ ಮೂವರು ಮೀನುಗಾರರು‌‌ ಸಮುದ್ರಪಾಲು, ಓರ್ವ ಪಾರು | ನಾಪತ್ತೆಯಾದವರಿಗೆ ಶೋಧ ಕಾರ್ಯ

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ  ಬಂದರಿನಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ ದೋಣಿ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಕ್ಕಿದ್ದು ದೋಣಿಯಲ್ಲಿದ್ದ ನಾಲ್ವರು ಮೀನುಗಾರರ ಪೈಕಿ ಮೂವರು ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ. ಓರ್ವ ಮೀನುಗಾರ ಈಜಿ ದಡ ಸೇರಿದ್ದಾರೆ. ಗಂಗೊಳ್ಳಿ ಸೀವಾಕ್ ಬಳಿ ಈ ದುರ್ಘಟನೆ ನಡೆದಿದೆ.

ಸುರೇಶ್ ಖಾರ್ವಿ, ಜಗನ್ನಾಥ್ ಖಾರ್ವಿ, ರೋಹಿತ್ ಖಾರ್ವಿ ನಾಪತ್ತೆಯಾದ ಮೀನುಗಾರರು. ಸಂತೋಷ್ ಖಾರ್ವಿ ಎನ್ನುವರು ಬಚಾವ್ ಆಗಿದ್ದಾರೆ.

ಮಂಗಳವಾರ ಬೆಳಿಗ್ಗೆ ನಾಲ್ಕು ಜನ ಮೀನುಗಾರರು ಹೊರಟಿದ್ದು, ಗಾಳಿ ಹಿನ್ನೆಲೆ ಸಮುದ್ರದ ಅಲೆಯ ರಭಸಕ್ಕೆ ಸಿಲುಕಿ ದೋಣಿ ಮಗುಚಿದ್ದು, ಮೀನುಗಾರ ಸಂತೋಷ್ ಈಜಿ ಬೇರೆ ದೋಣಿ ತಲುಪಿದ್ದು ಮೂವರು ಮೀನುಗಾರರು ಈತನಕ ನಾಪತ್ತೆಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು ಭೇಟಿ ನೀಡಿದ್ದು ಶೋಧ ಕಾರ್ಯ ಮುಂದುವರೆದಿದೆ. ದೋಣಿ ಸಮುದ್ರ ಪಾಲಾಗಿದ್ದು ಲಕ್ಷಾಂತರ ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಸ್ಥಳಕ್ಕೆ ಬೈಂದೂರು‌ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ್, ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಗಂಗೊಳ್ಳಿ ಪಿಎಸ್ಐ ಪವನ್ ನಾಯ್ಕ್, ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಆಗಮಿಸಿದ್ದಾರೆ.

Comments are closed.