ದುಬೈ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಸರ್ವಪ್ರಥಮ ಮತ್ತು ಏಕೈಕ ಸಮಗ್ರ ಯಕ್ಷಗಾನ ಅಭ್ಯಾಸ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಆಶ್ರಯದಲ್ಲಿ ದಶಮಾನೋತ್ಸವ ಹಾಗೂ ದುಬಾಯಿ ಯಕ್ಷೋತ್ಸವ ಸಂಭ್ರಮವನ್ನು ಆಚರಿಸಲಾಯಿತು.


ಯಕ್ಷಧ್ರುವ ಪಟ್ಲ ಫೌಂಡೇಶನ್ ಯು.ಎ.ಇ. ಘಟಕದ ಸಹಯೋಗದೊಂದಿಗೆ ಯಕ್ಷಗಾನ ಪೂರ್ವರಂಗ, ಗಾಯನ ಸೌರಭ ಮತ್ತು ಶಿವಾನಿ ಸಿಂಹವಾಹಿನಿ ಯಕ್ಷಗಾನ ಕಥಾ ಪ್ರಸಂಗ ಅತ್ಯಂತ ವಿಜೃಂಬಣೆಯಿಂದ ಭಕ್ತಿ ಭಾವದೊಂದಿಗೆ ಸಂಪನ್ನವಾಯಿತು.
2025 ಜೂನ್ 29ನೇ ತಾರೀಕಿನಂದು ದುಬಾಯಿಯಲ್ಲಿ ಇಂಡಿಯನ್ ಹೈಸ್ಕೂಲ್ ಶೇಖ್ ರಾಶೀದ್ ಆಡಿಟೋರಿಯಂ ನ ಭವ್ಯ ವೇದಿಕೆಯಲ್ಲಿ ಬೆಳಿಗ್ಗೆ 9.00 ಗಂಟೆಯಿಂದ ಅಬ್ಬರ ತಾಳದಿಂದ ಪ್ರಾರಂಭವಾಗಿ ಪುರೋಹಿತರಾದ ಪುತ್ತಿಗೆ ವಾಸುದೇವ ಭಟ್ಟ್ ಮತ್ತು ಅರ್ಚಕರ ತಂಡದವರಿಂದ ಚೌಕಿ ಪೂಜೆ ನಡೆದು ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಯ ಸಂಚಾಲಕರಾದ ಕೊಟ್ಟಿಂಜ ದಿನೇಶ್ ಶೆಟ್ಟಿ ಮತ್ತು ಯಕ್ಷ ಗುರುಗಳಾದ ಶೇಖರ್ ಶೆಟ್ಟಿಗಾರ್ ಹಾಗೂ ಪ್ರಖ್ಯಾತ ಭಾಗವತರಾದ ಯಕ್ಷ ಧ್ರುವ ಸತೀಶ್ ಶೆಟ್ಟಿ ಪಟ್ಲ, ಭಾಗವತ ದೇವಿಪ್ರಸಾದ್ ಆಳ್ವ, ಮಹಿಳಾ ಭಾಗವತರಾದ ಕಾವ್ಯಶ್ರೀ ಅಜೇರು ಹಿಮ್ಮೇಳ ಮುಮ್ಮೇಳದ ಕಲಾವಿದರು ಹಾಗೂ ಸರ್ವ ಸದಸ್ಯರು ಸಿರಿಗಂಧ ಪ್ರಸಾದವನ್ನು ಸ್ವೀಕರಿಸಿದರು.
ಯಕ್ಷಗಾನ ಅಭ್ಯಾಸ ಕೇಂದ್ರದ ಕಿರಿಯ ಹಾಗೂ ಹಿರಿಯ ಮಕ್ಕಳಿಂದ ಪೂರ್ವರಂಗ ನಡೆಯಿತು. ಊರಿನಿಂದ ಬಂದಿರುವ ಚೆಂಡೆ ಮದ್ದಳೆ ವಾದಕರಾದ ಚಂದ್ರ ಶೇಖರ ಸರಪಾಡಿ, ಹಾಗೂ ದುಬಾಯಿಯ ಚೆಂಡೆ ವಾದಕರಾದ ಸವಿನಯ ನೆಲ್ಲಿತೀರ್ಥ ಇವರ ಹಿಮ್ಮೇಳದಲ್ಲಿ ಭಾಗವತರಾದ ಶ್ರೀಯುತರುಗಳಾದ ಸತೀಶ್ ಶೆಟ್ಟಿ ಪಟ್ಲ, ದೇವಿಪ್ರಸಾದ್ ಆಳ್ವ ಮಹಿಳಾ ಭಾಗವತರಾದ ಕಾವ್ಯಶ್ರೀ ಅಜೇರು ಮತ್ತು ಹಿರಿಯ ಯಕ್ಷಗಾನ ಕಲಾವಿದರಾದ ಸುಬ್ರಾಯ ಹೊಳ್ಳ ಕಾಸರಗೋದು ಇವರುಗಳು ಯಕ್ಷಗಾನ ಗಾಯನ ಸೌರಭವನ್ನು ನಡೆಸಿಕೊಟ್ಟರು.
ದಶಮನೋತ್ಸವ ಸಂಭ್ರಮ ಸಡಗರದಲ್ಲಿ ಶ್ರೀ ದೇವಿ ಭಜಕ ವೃಂದ ಮತ್ತು ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಅಭಿಮಾನಿ ವೃಂದದವರ ಕೊಡುಗೆಯಾಗಿ ಶ್ರೀ ದೇವಿಗೆ ಬೆಳ್ಳಿಯ ಕಿರೀಟ, ತುರಾಯಿ ಮತ್ತು ಶಂಖ, ಚಕ್ರ ಗಳ ಸಮರ್ಪಣೆಯನ್ನು ಊರ, ಪರಊರ ಗಣ್ಯಾತಿ ಗಣ್ಯರು, ಅತಿಥಿ ಅಭ್ಯಾಗತರ ಜೊತೆಯಲ್ಲಿ ದಶಮಾನೋತ್ಸವ ಸಂಭ್ರಮದಲ್ಲಿ ಸ್ವೀಕರಿಸುವ ಹತ್ತು ಸಾಧಕರ ಜೊತೆಗೂಡಿ ವೈಭವದ ಶೋಭಾಯಾತ್ರೆಯಲ್ಲಿ ಚೆಂಡೆ, ಪಂಚವಾಧ್ಯ, ಮಂಗಳೂರಿನ ಬ್ಯಾಂಡ್ ವಾದನ, ಯಕ್ಷಗಾನ ವೇಷಧಾರಿಗಳೊಂದಿಗೆ ಸುಮಂಗಲೆಯರು ಪೂರ್ಣ ಕುಂಭ ಕಳಸದೊಂದಿಗೆ ಸಭಾಂಗಣದ ವೇದಿಕೆಗೆ ಮೆರವಣಿಗೆಯಲ್ಲಿ ತರಲಾಯಿತು.
ಯಕ್ಷಗಾನ ಅಭ್ಯಾಸ ಕೇಂದ್ರದ ದಶಮನೋತ್ಸವದ ಸಂಭ್ರಮದಲ್ಲಿ ಯು.ಎ.ಇ.ಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹತ್ತು ಮಂದಿ ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಂಘಟಕರ ನೆಲೆಯಲ್ಲಿ ಸರ್ವೋತ್ತಮ ಶೆಟ್ಟಿ, ಕಲಾಪೋಷಕರಾದ ಪ್ರವೀಣ್ ಕುಮಾರ್ ಶೆಟ್ಟಿ, ಸಮಾಜಸೇವೆಯಲ್ಲಿ ಬಾಲಕೃಷ್ಣ ಸಾಲಿಯಾನ್, ಕಲೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಬಿ. ಕೆ. ಗಣೇಶ್ ರೈ, ನಾಟಕ ಕ್ಷೇತ್ರದಲ್ಲಿ ಡೋನಿ ಕೊರೆಯಾ, ಭರತನಾಟ್ಯದಲ್ಲಿ ರೂಪಾ ಕಿರಣ್, ವಿಶ್ವದ ಅತೀ ದೊಡ್ಡ ಹೊರನಾಡ ಕನ್ನಡ ಕಲಿಕಾ ಕೇಂದ್ರ ಕನ್ನಡ ಪಾಠಶಾಲೆ, ವಿದೇಶದ ನೆಲದಲ್ಲಿ ಭಜನಾ ಸೇವೆಯಲ್ಲಿ ಶ್ರೀ ರಾಜರಾಜೇಶ್ವರಿ ಭಜಾನಾ ತಂಡ ಯು.ಎ.ಇ. ಮತ್ತು ಯು.ಎ.ಇ.ಯಲ್ಲಿ ಸಂಸ್ಕೃತಿ ಸೇವೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಊರಿನಿಂದ ಬಂದಿರುವ ಮಹಿಳಾ ಭಾಗವತರಾದ ಕಾವ್ಯಶ್ರೀ ಅಜೇರು, ಭಾಗವತರಾದ ದೇವಿಪ್ರಸಾದ ಆಳ್ವ, ಶ್ರೀದೇವಿ ಪಾತ್ರಧಾರಿ ಅರುಣ್ ಕೋಟ್ಯಾನ್, ಚೆಂಡೆ ಮದ್ದಳೆ ವಾದಕರು ಚಂದ್ರಶೇಖರ್ ಸರಪಾಡಿ, ಕಾರ್ಯಕ್ರಮ ನಿರೂಪಕರು ಚೇತನ್ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು. ನಿರ್ದೇಶಕರು ಹಾಗೂ ಮುಖ್ಯ ಗುರುಗಳು ಶೇಖರ್ ಶೆಟ್ಟಿಗಾರ್ ಮತ್ತು ನಾಟ್ಯಗುರುಗಳು ಶರತ್ ಕುಡ್ಲ ಇವರುಗಳನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.
“ಯಕ್ಷ ಶ್ರೀ ರಕ್ಷ ಗೌರವ ಪ್ರಶಸ್ತಿ – 2025”, ಕಾಸರಗೋಡು ಶ್ರೀಯುತ ಸುಬ್ರಾಯ ಹೊಳ್ಳ ರವರಿಗೆ ಪ್ರದಾನ: ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಕೊಡಮಾಡುವ ಪ್ರತಿಷ್ಠಿತ ಯಕ್ಷ ಶ್ರೀ ರಕ್ಷ ಗೌರವ ಪ್ರಶಸ್ತಿ- 2025 ನ್ನು ಯಕ್ಷಗಾನ ರಂಗದಲ್ಲಿ ಹಿರಿಯ ಕಲಾವಿದರು ಶ್ರೀ ಕಟೀಲು ಮೇಳದಲ್ಲಿ ಪ್ರಮುಖ ಪಾತ್ರಧಾರಿಯಾಗಿ ನಾಲ್ಕು ದಶಕಗಳ ಕಾಲ ತಿರುಗಾಟ ಮಾಡಿರುವ ಶ್ರೀ ಸುಬ್ರಾಯ ಹೊಳ್ಳರಿಗೆ ಪ್ರದಾನಿಸಲಾಯಿತು.
Comments are closed.