ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಅಂಗವಾಗಿ ಕಾನೂನು ಮಾಹಿತಿ ಅರಿವು ಕಾರ್ಯಕ್ರಮ
ಕುಂದಾಪುರ: ಖರೀದಿ ಮಾಡುವವರು ಮತ್ತು ಸೇವೆ ಪಡೆಯುವ ಎರಡು ವರ್ಗದವರು ಗ್ರಾಹಕರಾಗಿರುತ್ತಾರೆ. ಯಾವುದೇ ವಸ್ತುಗಳ ಖರೀದಿ ಮಾಡುವಾಗ ಅದರ ಬಗ್ಗೆ ಅರಿವು, ಜಾಗೃತಿ ಮುಖ್ಯ. ಗ್ರಾಹಕರು ತಮ್ಮ ಹಕ್ಕುಗಳನ್ನು ಅರಿತುಕೊಳ್ಳಬೇಕು. ತಮಗಾಗುವ ಅನ್ಯಾಯ, ತೊಂದರೆ ತಪ್ಪಿಸಲು ವಿವಿಧ ಹಂತಗಳಲ್ಲಿ ಗ್ರಾಹಕರ ವೇದಿಕೆಗಳಿದ್ದು ನ್ಯಾಯಾಲಯದ ಮಾದರಿಯಲ್ಲಿ ವೇದಿಕೆ ಕಾರ್ಯನಿರ್ವಹಿಸಿ ಗ್ರಾಹಕರಿಗೆ ನ್ಯಾಯ ಒದಗಿಸುತ್ತದೆ ಎಂದು ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರು ಹಾಗೂ ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಶೃತಿಶ್ರೀ ಎಸ್. ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಗ ಇಲಾಖೆ ಹಾಗೂ ತಾಲೂಕು ಆಡಳಿತ ಕುಂದಾಪುರದ ಸಹಭಾಗಿತ್ವದಲ್ಲಿ ಕುಂದಾಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ‘ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಅಂಗವಾಗಿ ಕಾನೂನು ಮಾಹಿತಿ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುಂದಾಪುರದ ಸಹಾಯಕ ಸರಕಾರಿ ಅಭಿಯೋಜಕಿ ಉಮಾ ದಾಮೋದರ್ ನಾಯಕ್ ಮಾತನಾಡಿ, ಸಂವಿಧಾನದ ಆಶಯದಂತೆ ಗ್ರಾಹಕರು ತಮ್ಮ ಹಕ್ಕು, ಕರ್ತವ್ಯಗಳ ಬಗ್ಗೆ ಜ್ಞಾನ ಹೊಂದಬೇಕು. ಕಾನೂನು ಅರಿವು ಮೂಡಿಸುವುದು ಸಂವಿಧಾನದಲ್ಲಿದೆ. ಮುಲಾಜಿಗೊಳಪಟ್ಟು ಬದುಕಿದಾಗ ಅನ್ಯಾಯ ಹೆಚ್ಚುತ್ತದೆ. ಹಾಗಾಗಿ ಗ್ರಾಹಕರು ಕಾನೂನು ಅರಿವು ಬೆಳೆಸಿಕೊಳ್ಳಬೇಕು. 1986ರಲ್ಲಿ ಗ್ರಾಹಕರ ಹಕ್ಕು ಕಾಯ್ದೆ ಜಾರಿಗೆ ಬಂದಿದ್ದು 2019ರಲ್ಲಿ ಹೊಸ ತಿದ್ದುಪಡಿಯೊಂದಿಗೆ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿದೆ ಎಂದರು.
ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿ ಟೆಕ್ನಾಲಜಿ ವಿಚಾರದಲ್ಲಿ ಗ್ರಾಹಕರ ಹಕ್ಕುಗಳ ದಿನಾಚರಣೆ ನಡೆಸಲಾಗುತ್ತಿದ್ದು ಆನ್ಲೈನ್ ಖರೀದಿಗಳ ಬಗ್ಗೆ ಎಚ್ಚರಿಕೆ ಅಗತ್ಯ. ಸಾಮಾಜಿಕ ಜವಬ್ದಾರಿಯೊಂದಿಗೆ ಗ್ರಾಹಕರು ತಮ್ಮ ಹಕ್ಕುಗಳನ್ನು ಅರಿಯಬೇಕೆಂದರು.
ಕುಂದಾಪುರ ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್., ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಸಂಪನ್ಮೂಲ ವ್ಯಕ್ತಿಯಾಗಿ ವಕೀಲ ವೈ. ಶರತ್ ಕುಮಾರ್ ಶೆಟ್ಟಿ ಭಾಗವಹಿಸಿದ್ದರು.
ವಂಡ್ಸೆ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ ನಿರೂಪಿಸಿ, ವಂದಿಸಿದರು.
ಮೋಸ ಮಾಡುವವರಿಗಿಂತ ಮೋಸ ಹೋಗುವವರು ಹೆಚ್ಚುತ್ತಿದ್ದಾರೆ. ತಮಗಾಗುವ ಮೋಸದ ಕುರಿತು ಎಚ್ಚರಿಕೆ ಅಗತ್ಯ. ಕಾನೂನು ವಿಚಾರದಲ್ಲಿ ಅಜ್ಞಾನಿಗಳಾದಷ್ಟು ಮೋಸ ಹೋಗುವಿಕೆ ಹೆಚ್ಚುತ್ತಿದೆ.
– ವೈ. ಶರತ್ ಕುಮಾರ್ ಶೆಟ್ಟಿ (ವಕೀಲರು)
Comments are closed.