ಮಂಗಳೂರು: ಯಕ್ಷಗಾನದ ತೆಂಕುತಿಟ್ಟಿನ ಪ್ರಖ್ಯಾತ ಭಾಗವತ ಬಲಿಪ ನಾರಾಯಣ ಭಾಗವತ (84) ಅವರು ಗುರುವಾರ ವಿಧಿವಶರಾದರು.

ಬಲಿಪ ನಾರಾಯಣ ಭಾಗವತರು ಮೂಲತಃ ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದವರಾಗಿದ್ದು ಮೂಡಬಿದಿರೆಯ ಸಮೀಪದ ನೂಯಿ ಎಂಬಲ್ಲಿ ವಾಸವಾಗಿದ್ದರು. ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಹಲವಾರು ವರ್ಷ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಹಲವಾರು ಪ್ರಸಂಗಗಳನ್ನು ರಚಿಸಿದ್ದರು. ಯಕ್ಷಗಾನ ಹಾಡುಗಳ ಅನೇಕ ಕೃತಿಗಳನ್ನೂ ರಚಿಸಿದ್ದರು.
ಬಲಿಪ ಭಾಗವತರ ನಿಧಾನಕ್ಕೆ ಗಣ್ಯರು, ಜನಪ್ರತಿನಿಧಿಗಳು ಸೇರಿ ಸಾವಿರಾರು ಮಂದಿ ಕಲಾವಿದರು ತೀವ್ರ ಸಂತಾಪ ಸೂಚಿಸಿದ್ದಾರೆ.
ದೇವಿ ಮಾಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ, ತೆಂಕು ತಿಟ್ಟಿನ ಎಲ್ಲಾ ಪೌರಾಣಿಕ ಪ್ರಸಂಗಳ ಪದ್ಯಗಳಿಗೆ ತನ್ನ ಪರಿಪೂರ್ಣ ಯಕ್ಷಗಾನೀಯ ಶೈಲಿಯ ಏರು ಸ್ವರದ ಭಾಗವತಿಕೆಯ ಮೂಲಕ ಪರಿಪೂರ್ಣ ನ್ಯಾಯ ಒದಗಿಸಿಕೊಟ್ಟವರು ಬಲಿಪ ಭಾಗವತರು.
ಬಲಿಪ ನಾರಾಯಣ ಭಾಗವತರು 60ಕ್ಕೂ ಹೆಚ್ಚು ವರ್ಷಗಳ ಕಾಲ ಸುದೀರ್ಘ ಯಕ್ಷಗಾನ ಕಲಾ ಸೇವೆ ಸಲ್ಲಿಸಿದ್ದಾರೆ. ಪಡ್ರೆ ಜಠಾಧಾರಿ ಮೇಳವನ್ನು ಮೊದಲಿಗೆ ಆರಂಭಿಸಿದ್ದರು. ಯಕ್ಷಗಾನದ 50ಕ್ಕೂ ಹೆಚ್ಚು ಪ್ರಸಂಗಗಳ ಕಂಠಪಾಠ ಬಲಿಪ ಭಾಗವತರಿಗಿತ್ತು.30 ಪ್ರಕಟಿತ ಮತ್ತು 15 ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ.
Comments are closed.