ಮಂದರ್ತಿ ಮೈರಕೊಮೆಯಲ್ಲಿ ಕರಾವಳಿ ಪ್ರಜಾಧ್ವನಿ ಯಾತ್ರೆ ಉದ್ಘಾಟನೆ

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕುಂದಕನ್ನಡ ಅಭಿವೃದ್ಧಿಗೆ ಈವರೆಗೆ ಪ್ರಾಧಿಕಾರ ರಚಿಸಿ ಭಾಷೆಯನ್ನು ಉನ್ನತಿಗೇರಿಸುವ ಪ್ರಯತ್ನಕ್ಕೆ ಜನಪ್ರತಿನಿಧಿಗಳು ಹೋಗಿಲ್ಲ. ಬಹುಕಾಲದ ಬೇಡಿಕೆಯಾದ ಕುಂದಾಪುರ-ಗಂಗೊಳ್ಳಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಕಾಯಕಲ್ಪ ಒದಗಿಸದೇ ಇರುವುದು ಜನರಿಂದ ಮತ ಪಡೆದು ಹಲವು ಬಾರೀ ಗೆದ್ದ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯನ್ನು ತೋರಿಸುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಟೀಕಿಸಿದರು.


ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಂದರ್ತಿ ಸಮೀಪದ ಮೈರಕೊಮೆ ಎಂಬಲ್ಲಿ ಬುಧವಾರ ಬೆಳಿಗ್ಗೆ ನಡೆದ ಕರಾವಳಿ ಪ್ರಜಾಧ್ವನಿ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಬ್ಬಲ್ ಎಂಜಿನ್ ಸರ್ಕಾರ ಭ್ರಷ್ಟಾಚಾರ ಬಿಟ್ಟು ಬೇರೇನೂ ಮಾಡಿಲ್ಲ. ಪೊಲೀಸ್, ಶಿಕ್ಷಕರ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದರೂ ಗ್ರಹ ಮಂತ್ರಿಗಳು ಏನು ನಡೆದಿಲ್ಲ ಎಂಬಂತೆ ಹೇಳಿಕೆ ಕೊಡುತ್ತಾರೆ. ಹಿರಿಯರು ಮಾಡಿದ್ದನ್ನು ಹಾಳು ಮಾಡುವ ಮನೆಹಾಳನಂತೆ ದೇಶ ಮುನ್ನೆಡೆಸುವವರು ಧೋರಣೆ ಹೊಂದಿದ್ದಾರೆ. ಬಿಜೆಪಿಯು ಧರ್ಮಾಧಾರಿತವಾಗಿ ರಾಜಕಾರಣ ಮಾಡುತ್ತಿದ್ದು ಸುಳ್ಳು ಅವರ ಮನೆ ದೇವರಾಗಿದೆ. ಹಿಂಸೆ ಅವರ ತತ್ವಾಗಿದ್ದು ಬಡವರ ಮಕ್ಕಳನ್ನು ಬಾವಿಗೆ ದೂಡಿ ಆಳ ನೋಡುವ ಕೀಳುಮಟ್ಟದ ಮನಸ್ಥಿತಿ ಅವರದ್ದಾಗಿದೆ. ಮಕ್ಕಳ ಕೈಯಲ್ಲಿ ಪೆನ್ನು ಪೇಪರ್ ನೀಡಿ ಸುಶಿಕ್ಷಿತರನ್ನಾಗಿ ಮಾಡಬೇಕು ಹೊರತು ಆಯುಧ ನೀಡಿ ಭಯೋತ್ಪಾಧಕರನ್ನಾಗಿಸುವ ಹುನ್ನಾರ ಮಾಡುತ್ತಿರುವ ಬಿಜೆಪಿಗರಿಗೆ ಜನರು ತಕ್ಕ ಶಾಸ್ತಿ ಮಾಡಬೇಕು. ಸಂವಿಧಾನದ ಆಶಯಗಳನ್ನು ಪಾಲಿಸಿ ಜಾತಿ, ಧರ್ಮ, ಭಾಷೆ ರಹಿತವಾಗಿ ಕೆಲಸ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಬೇಕು ಎಂದವರು ಮನವಿ ಮಾಡಿದರು.
ಎಐಸಿಸಿ ಕಾರ್ಯದರ್ಶಿ ರೋಝಿ ಎಂ. ಜಾನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ ಗಫೂರ್, ಎಸ್. ರಾಜು ಪೂಜಾರಿ, ಬೈಂದೂರು ಯೂತ್ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಅಶೋಕ್ ಪೂಜಾರಿ ಬೀಜಾಡಿ, ಶ್ಯಾಮಲಾ ಭಂಡಾರಿ, ಸ್ಥಳೀಯ ಪ್ರಮುಖರಾದ ಕಿಶೋರ್, ಮಮತಾ ಶೆಟ್ಟಿ ಮೊದಲಾದವರಿದ್ದರು.
ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಂಕರ್ ಎ. ಕುಂದರ್ ಸ್ವಾಗತಿಸಿದರು. ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿದರು.
Comments are closed.