ಕರಾವಳಿ

ಮಂಗಳೂರು ಜುವೆಲ್ಲರಿ ಸಿಬ್ಬಂದಿ ಬರ್ಬರ ಹತ್ಯೆ; ಶಂಕಿತ ದುಷ್ಕರ್ಮಿಯ ಫೋಟೋ ಬಿಡುಗಡೆ ಮಾಡಿದ ಪೊಲೀಸರು

Pinterest LinkedIn Tumblr

ಮಂಗಳೂರು: ನಗರದ ಜುವೆಲ್ಲರಿ ಅಂಗಡಿಯೊಂದರಲ್ಲಿ ಶುಕ್ರವಾರ ಹಾಡಹಗಲೇ ಸಿಬಂದಿಯನ್ನು ಹತ್ಯೆಗೈದ ಆರೋಪಿಯ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ. ಪ್ರಕರಣದ ಶಂಕಿತ ಆರೋಪಿಯ ಸಿಸಿ ಕೆಮರಾ ಚಿತ್ರವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ದುಷ್ಕರ್ಮಿ ಜೀನ್ಸ್, ಟೀ ಶರ್ಟ್ ಹಾಗೂ ಗುರುತು ಮರೆಮಾಚಲು ಮಾಸ್ಕ್, ಕ್ಯಾಪ್‌ ಮತ್ತು ಜರ್ಕಿನ್‌ ಧರಿಸಿರುವುದು ತಿಳಿದುಬಂದಿದೆ.

ನಗರದ ಹೃದಯ ಭಾಗದಲ್ಲಿ ಹಾಡುಹಗಲೇ ನಡೆದ ಕೊಲೆ ಪ್ರಕರಣದ ಆರೋಪಿಯ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಪೊಲೀಸರು ಕೃತ್ಯ ನಡೆದ ಅಕ್ಕಪಕ್ಕದ ಅಂಗಡಿಗಳ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು ಈ ಮೂಲಕ ಶಂಕಿತನ ಫೋಟೋ ಬಿಡುಗಡೆ ಮಾಡಿದ್ದಾರೆ.

ಘಟನೆ ಹಿನ್ನೆಲೆ: ಹತ್ಯೆಯಾದ ಜುವೆಲರಿ ಅಂಗಡಿಯ ಸಿಬಂದಿ ರಾಘವ ಆಚಾರ್ಯ (55) ಹಲವು ವರ್ಷದಿಂದ ಕೆಲಸಕ್ಕಿದ್ದರು. ಅಂಗಡಿ ಮಾಲಿಕ ಊಟಕ್ಕೆ ತೆರಳಿದ್ದು ಇವರೊಬ್ಬರೆ ಇದ್ದಾಗ ಈ ಘಟನೆ ನಡೆದಿದೆ. ಒಟ್ಟು 12 ಗ್ರಾಂ ತೂಕದ 60,000 ರೂ. ಮೌಲ್ಯದ 3 ಚಿನ್ನದ ಸರಗಳನ್ನು ದರೋಡೆ ಮಾಡಲಾಗಿದೆ ಎಂದು ಮಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.