ಕರಾವಳಿ

ಶಿಕ್ಷಕರ ಕೊರತೆಯಿಂದಾಗಿ ಸರಕಾರಿ ಶಾಲೆಗಳ ಗುಣಮಟ್ಟ ಕಡಿಮೆ: ಶಿಕ್ಷಣ ತಜ್ಞ ಡಾ| ನಿರಂಜನಾರಾಧ್ಯ ವಿ.ಪಿ

Pinterest LinkedIn Tumblr

ಕುಂದಾಪುರ: ಶಿಕ್ಷಣದ ವ್ಯಾಪಾರೀಕರಣ, ಇಂಗ್ಲೀಷ್ ವ್ಯಾಮೋಹ, ಖಾಸಗಿ ಶಾಲೆಗಳ ಆಟಾಟೋಪ ಹಾಗೂ ನಮ್ಮನ್ನಾಳುವ ಜನಪ್ರತಿನಿಧಿಗಳ ಬದ್ಧತೆಯ ಕೊರತೆಯಿಂದಾಗಿ ಸರ್ವಧರ್ಮದ ದೇಗುಲ, ಸಂವಿಧಾನದ ತೊಟ್ಟಿಲಾಗಿರುವ ಸರ್ಕಾರಿ ಶಾಲೆಗಳು ಸೊರಗುತ್ತಿದ್ದು ನಾವೆಲ್ಲರೂ ಎಚ್ಚೆತ್ತುಕೊಂಡು ಒಗ್ಗಟ್ಟಿನ ಹೋರಾಟ ನಡೆಸಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಅನಿವಾರ್ತೆಯಿದೆ ಎಂದು ಎಸ್.ಡಿ.ಎಂ.ಸಿ.ಸಿ.ಎಫ್ ಕುಂದಾಪುರ ವಲಯದ ತಾಲೂಕು ಅಧ್ಯಕ್ಷ ಎಸ್.ವಿ ನಾಗರಾಜ್ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉಡುಪಿ ಜಿಲ್ಲೆ, ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾರ್ಕಳ ತಾಲೂಕು ಸಮಿತಿ ಹಾಗೂ ಕುಂದಾಪುರ ರೋಟರಿ ಕ್ಲಬ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲೆ, ತಾಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರ ಇವರ ಸಹಯೋಗದಲ್ಲಿ ಫೆ.6 ಸೋಮವಾರದಂದು ಕುಂದಾಪುರ ಬಿಇಓ ಕಚೇರಿ‌ ಸಮೀಪದ ರೋಟರಿ ಭವನದಲ್ಲಿ ‘ಸರಕಾರಿ ಶಾಲೆ ಉಳಿಯಲಿ ಬೆಳೆಯಲಿ-ನೆರೆಹೊರೆಯ ಸಮಾನ ಶಾಲೆಯಾಗಲಿ’ ಧ್ಯೇವವಾಕ್ಯದೊಂದಿಗೆ ನಡೆದ ‘ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ-2009 ಮಾಹಿತಿ ಕಾರ್ಯಗಾರ’ದಲ್ಲಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿನ 47 ಸಾವಿರ ಸರ್ಕಾರಿ ಶಾಲೆಗಳಲ್ಲಿ 8.5 ಲಕ್ಷ ಹಾಗೂ ಉಡುಪಿ ಜಿಲ್ಲೆಯ 5 ಶೈಕ್ಷಣಿಕ ವಲಯದಲ್ಲಿನ 680ಕ್ಕೂ ಅಧಿಕ ಸರ್ಕಾರಿ ಶಾಲೆಗಳಲ್ಲಿ 11,500 ಎಸ್.ಡಿ.ಎಂ.ಸಿ ಸದಸ್ಯರಿದ್ದು ಒಂದೇ ದಿನ ಬೀದಿಗಿಳಿದು ಹೋರಾಟ ಮಾಡಿದರೆ ನಮ್ಮನ್ನಾಳುವ ಜನಪ್ರತಿನಿಧಿಗಳ ಹಾಗೂ ಸರಕಾರದ ಕಥೆ ಏನಾಗಬಹುದೆಂದು ಆಲೋಚಿಸಲಿ ಎಂದ ಅವರು ಪ್ರಜಾಪ್ರಭುತ್ವ ಮಾದರಿಯಲ್ಲಿ ಎಸ್‌ಡಿಎಂಸಿ ಸದಸ್ಯರು ಆಯ್ಕೆಯಾಗಿದ್ದು ಆರ್.ಟಿ.ಇ ಕಾಯ್ದೆಯಡಿ ಕಾನೂನು ಬಲ ಕೂಡ ಹೊಂದಿದ್ದು ಸರಕಾರಿ ಶಾಲೆಗಳ ಉಳಿಸುವ ನಿಟ್ಟಿನಲ್ಲಿ ಕಾನೂನು ಹೋರಾಟಕ್ಕೆ ಸಿದ್ದರಿದ್ದೇವೆ. ಜಾತಿ ರಹಿತ, ರಾಜಕೀಯ ಹಾಗೂ ಸ್ವಹಿತಾಸಕ್ತಿ ರಹಿತವಾಗಿ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ಕೆಲಸ ಮಾಡುತ್ತಿದ್ದು ಯಾವುದೇ ಆರ್ಥಿಕ ವಹಿವಾಟು ನಡೆಸದೆ ಸಂಪಾದನೆ ಒಂದು ಭಾಗವನ್ನು ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಮೀಸಲಿಟ್ಟಿದ್ದೇವೆ ಎಂದವರು ಮಾಹಿತಿ ನೀಡಿದರು.

ಉದ್ಯಮಿ, ಮುಂಬಯಿನ ಎಸ್.ಒ.ಎಸ್ ಇಂಟರ್ ನ್ಯಾಶನಲ್ ಆಡಳಿತ ನಿರ್ದೇಶಕ ಅಬ್ದುಲ್ ಸಿರಾಜುದ್ದಿನ್ ಭಟ್ಕಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ಸಮನ್ವಯ ವೇದಿಕೆ ಕಾರ್ಯ ಅಭಿನಂದನಾರ್ಹವಾಗಿದೆ ಎಂದು ಶುಭಹಾರೈಸಿದರು.

ಸಮನ್ವಯ ವೇದಿಕೆಯ ಮಹಾಪೋಷಕರು ಹಾಗೂ ಅಭಿವೃದ್ಧಿ ಶಿಕ್ಷಣ ತಜ್ಞ ಪ್ರೊ. ಡಾ. ನಿರಂಜನಾರಾಧ್ಯ ವಿ.ಪಿ ಅವರು ಪ್ರಧಾನ ವಿಷಯ ಮಂಡಿಸಿದರು.

ಉಡುಪಿ ಜಿಲ್ಲಾ ಎಸ್.ಡಿ.ಎಂ.ಸಿ.ಸಿ.ಎಫ್ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಎಸ್.ಡಿ.ಎಂ.ಸಿ.ಸಿ.ಎಫ್ ಉಡುಪಿ ಜಿಲ್ಲಾ ಕಾರ್ಯದರ್ಶಿ ದೀಪಾ ಮಹೇಶ್, ಬ್ರಹ್ಮಾವರ ತಾಲೂಕು ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಕುಂದಾಪುರ ಪುರಸಭಾ ಘಟಕದ ಅಧ್ಯಕ್ಷ ಅಶ್ವಥ್ ಕುಮಾರ್, ಕುಂದಾಪುರ ತಾಲೂಕು ಕಾರ್ಯದರ್ಶಿ ಪ್ರಮೋದಾ ಕುಶಲ ಶೆಟ್ಟಿ, ಬ್ರಹ್ಮಾವರ ತಾಲೂಕು ಪ್ರಭಾರ ಕಾರ್ಯದರ್ಶಿ ಆರತಿ ಮೆಲಾಂಟ, ಕುಂದಾಪುರ ಬಿ.ಆರ್.ಪಿ ಸಂತೋಷ್ ಕುಮಾರ್ ಶೆಟ್ಟಿ ಮೊದಲಾದವರಿದ್ದರು.

ಎಸ್.ಡಿ.ಎಂ.ಸಿ.ಸಿ.ಎಫ್ ಬೈಂದೂರು ತಾಲೂಕು ಅಧ್ಯಕ್ಷ ಅವನೀಶ್ ಹೊಳ್ಳ ಸ್ವಾಗತಿಸಿ, ಕುಂದಾಪುರ ತಾಲೂಕು ಉಪಾಧ್ಯಕ್ಷ ರಾಜಶೇಖರ್, ಎಸ್ಡಿಎಂಸಿ ಕುಂಭಾಸಿ ಗ್ರಾ.ಪಂ ಘಟಕಾಧ್ಯಕ್ಷೆ ದೀಪಿಕಾ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ರವಿ ಮರವಂತೆ ವಂದಿಸಿದರು.

ಶಿಕ್ಷಕರ ಕೊರತೆಯಿಂದಾಗಿ ಸರಕಾರಿ ಶಾಲೆಗಳ ಗುಣಮಟ್ಟ ಕಡಿಮೆಯಾಗುತ್ತಿದ್ದು ಈ ಶಾಲೆಗಳಿಗೆ ಮಕ್ಕಳನ್ನು ಕಳಿಸಲು ಪೋಷಕರು ಹಿಂದೇಟು ಹಾಕುವಂತಾಗಿದೆ. ಈ ಅವ್ಯವಸ್ಥೆಗೆ ಸರಕಾರವೇ ನೇರ ಹೊಣೆ. ಶಿಕ್ಷಕರ ಭರ್ತಿಗೆ ಸರಕಾರ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕುಗಳ ಕಾಯ್ದೆಯನ್ನು ಕಳೆದ ಅನೇಕ ವರ್ಷಗಳಿಂದ ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ.
– ಡಾ| ನಿರಂಜನಾರಾಧ್ಯ ವಿ.ಪಿ. (ಶಿಕ್ಷಣ ತಜ್ಞ, ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಮಹಾ ಪೋಷಕರು)

ಸರಕಾರಕ್ಕೆ ಹಕ್ಕೋತ್ತಾಯ ಮಾಡುತ್ತೇವೆ..
ಖಾಸಗಿ ಶಾಲೆಗಳಿಗೆ ಪರವಾನಿಗೆ ನೀಡಬಾರದು. ಸರಕಾರಿ ಶಾಲೆಗಳನ್ನು ಮುಚ್ಚುವ ಕಾರ್ಯವಾಗಬಾರದು ಎಂಬ ಹಕ್ಕೊತ್ತಾಯವನ್ನು ಸರ್ಕಾರದ ಮುಂದೆ ಮಾಡಲಿದ್ದೇವೆ. ಜನಪ್ರತಿನಿಧಿಗಳು ಹಾಗೂ ಸರಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಗೆ ಬರಬೇಕು. ದುಬಾರಿ ಶುಲ್ಕ ನೀಡಿ ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸುವ ಪೋಷಕರ ಬಿ.ಪಿ.ಎಲ್ ಕಾರ್ಡ್ ರದ್ದುಗೊಳಿಸುವಲ್ಲಿ ಕ್ರಮವಹಿಸಿದರೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚುವುದರಲ್ಲಿ ಸಂದೇಹವಿಲ್ಲ. ಪೂರ್ವಿಕರು, ನಾವು ಕಲಿತ ಸರಕಾರಿ ಶಾಲೆಗಳನ್ನು ಉಳಿಸುವಲ್ಲಿ ಆತ್ಮವಿಮರ್ಷೆ ಜೊತೆಗೆ ನಮ್ಮ ಹೋರಾಟ ನಿಶ್ಚಿತ.
– ಎಸ್.ವಿ ನಾಗರಾಜ್ (ಎಸ್.ಡಿ.ಎಂ.ಸಿ.ಸಿ.ಎಫ್ ಕುಂದಾಪುರ ವಲಯದ ತಾಲೂಕು ಅಧ್ಯಕ್ಷ)

Comments are closed.