ಕುಂದಾಪುರ: ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಮೊಬೈಲ್’ಗೆ ಕರೆ ಮಾಡಿ ಹತ್ತು ಲಕ್ಷ ರೂಪಾಯಿ ನೀಡದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಬನ್ನಾಡಿಯ ಅಜಿತ್ ಕುಮಾರ್ ಶೆಟ್ಟಿ ಎನ್ನುವರು ದೂರು ನೀಡಿದವರು. ಭರತ್ ದಾಸ್ ಹಾಗೂ ಇನ್ನೋರ್ವ ವ್ಯಕ್ತಿಗಳ ಹೆಸರು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆಗಸ್ಟ್ 31ರಂದು ಸಂಜೆ 5 ಗಂಟೆಗೆ ಅಜಿತ್ ಕುಮಾರ್ ಶೆಟ್ಟಿಯವರ ನಂಬರಿಗೆ ವಾಟ್ಸಾಪ್ ಕರೆ ಬಂದಿದ್ದು, ಅನಾಮಿಕ ಕರೆಯಾದ್ದರಿಂದ ಸ್ವೀಕರಿಸಿರಲಿಲ್ಲ. ಪದೇ ಪದೇ ಕರೆ ಬರಲಾರಂಭಿಸಿದ ನಂತರ ಕರೆ ಸ್ವೀಕರಿಸಿದ್ದು ಕರೆ ಮಾಡಿದಾತ ತನ್ನನ್ನು ಭರತ್ ದಾಸ್ ಕರೆ ಮಾಡಲು ಸೂಚಿಸಿದ್ದು, ನೀನು ನನಗೆ 10 ಲಕ್ಷ ಹಣವನ್ನು ಕೂಡಲೇ ನೀಡಬೇಕು. ಇಲ್ಲವಾದಲ್ಲಿ ನಿನ್ನನ್ನು ಕೊಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾನೆನ್ನಲಾಗಿದೆ. ಸ್ವಲ್ಪ ಸಮಯದ ನಂತರ ಕರೆ ಮಾಡಿದ ವ್ಯಕ್ತಿಯು ವಾಟ್ಸಾಪ್ ನಲ್ಲಿ ಧ್ವನಿ ಮುದ್ರಿತ ಮೇಸೇಜ ನ್ನು ಕಳುಹಿಸಿದ್ದು, ಅಜಿತ್ ಶೆಟ್ಟಿಯವರನ್ನು ಅವಾಚ್ಯವಾಗಿ ನಿಂದಿಸಿ ಬೆಳಿಗ್ಗೆ ಆಗುವುದರೊಳಗೆ ತೆಗೆದು ಬಿಡುತ್ತೇನೆ ಎಂದು ಬೆದರಿಸಿದ್ದಾನೆ ಎನ್ನಲಾಗಿದೆ. ಇನ್ನೊಂದು ಮೆಸೇಜ್ ಬಂದಿದ್ದು, ಅದರಲ್ಲಿ ಬೆಳಿಗ್ಗೆ ಆಗುವುದರೊಳಗೆ ತೆಗೆದುಬಿಡುತ್ತೇನೆ ಎಂಬುದಾಗಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Comments are closed.