ಕರಾವಳಿ

ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿ ಚಂದ್ರ ಕೆ. ಹೆಮ್ಮಾಡಿಗೆ ಮತ್ತೆರಡು ಪ್ರಕರಣದಲ್ಲಿ ಶಿಕ್ಷೆ

Pinterest LinkedIn Tumblr

ಉಡುಪಿ: ನಾಲ್ಕು ವರ್ಷಗಳ ಶಾಲಾ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪೋಕ್ಸೊ ಪ್ರಕರಣಗಳ ಆರೋಪಿ, ಪತ್ರಕರ್ತನಾಗಿದ್ದ ಚಂದ್ರ ಕೆ.ಹೆಮ್ಮಾಡಿ(40)ಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯವು ಮತ್ತೆ ಎರಡು ಪ್ರಕರಣಗಳಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2018ರ ಜೂನ್ ತಿಂಗಳಲ್ಲಿ 14 ವರ್ಷ ಪ್ರಾಯದ ಬಾಲಕನನ್ನು ಚಂದ್ರ ಹೆಮ್ಮಾಡಿ, ಜಲಪಾತದ ಫೋಟೋ ತೆಗೆಯಲು ಇದೆ ಎಂದು ಹೇಳಿ ಕಾಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ಆರೋಪದಲ್ಲಿ ಚಂದ್ರ ಹೆಮ್ಮಾಡಿಯನ್ನು ಬೈಂದೂರು ಪೊಲೀಸರು 2018ರ ನ.28ರಂದು ಬಂಧಿಸಿದ್ದರು. ಆಗಿನ ಬೈಂದೂರು ಪೊಲೀಸ್ ನಿರೀಕ್ಷಕ ಪರಮೇಶ್ವರ್ ಆರ್. ಗುನಗ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಒಟ್ಟು 21 ಸಾಕ್ಷಿಗಳ ಪೈಕಿ 14 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ನೊಂದ ಬಾಲಕರು ಮತ್ತು ಸಾಂದರ್ಭಿಕ ಸಾಕ್ಷಗಳ ಆಧಾರದಲ್ಲಿ ಆರೋಪಿಗೆ ನ್ಯಾಯಾಧೀಶ ಶ್ರೀನಿವಾಸ ಸುವರ್ಣ 10ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು.ಇನ್ನೊಂದು ಪ್ರಕರಣದಲ್ಲಿ ಲೈಂಗಿಕ ಕಿರುಕುಳ ನೀಡಿರುವುದಕ್ಕೆ 3 ವರ್ಷ ಕಠಿಣ ಶಿಕ್ಷೆ ಮತ್ತು 1 ಸಾವಿರ ರೂ. ದಂಡ ವಿಧಿಸಲಾಗಿದೆ.

ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದಿಸಿದ್ದರು.

ತಾನು ಪತ್ರಕರ್ತ ಎಂದು ಹೇಳಿಕೊಂಡು ಸುದ್ದಿ ವಿಚಾರದಲ್ಲಿ ದಾರಿ ತನಗೆ ಫೊಟೋ ತೆಗೆಯಲು ಸ್ಥಳಗಳ ದಾರಿ ತೋರಿಸಬೇಕೆಂಬ ನೆಪವೊಡ್ಡಿ ಶಾಲಾ ವಿದ್ಯಾರ್ಥಿಗಳನ್ನು ಕಾಡಿಗೆ ಕರೆದುಕೊಂಡು ಹೋಗುತ್ತಿದ್ದ ಚಂದ್ರ ಹೆಮ್ಮಾಡಿ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂಬ ಆರೋಪವಿದೆ.

ಒಟ್ಟು 21 ಬಾಲಕರು ನೀಡಿದ ದೂರಿನಂತೆ ಆರೋಪಿ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ 16, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಮೂರು ಹಾಗೂ ಕುಂದಾಪುರ ಗ್ರಾಮಾಂತರ ಮತ್ತು ಕೊಲ್ಲೂರು ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣಗಳು ಪೋಕ್ಸೊ ಕಾಯಿದೆಯಡಿ ದಾಖಲಾಗಿತ್ತು. ಒಟ್ಟು 21 ಪೋಕ್ಸೊ ಪ್ರಕರಣಗಳಲ್ಲಿ ಈವರೆಗೆ 11 ಪ್ರಕರಣಗಳಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಎಂಟು ಪ್ರಕರಣಗಳಲ್ಲಿ ಆರೋಪಿ ಸಾಕ್ಷಗಳ ಕೊರತೆಯಿಂದ ಖುಲಾಸೆಗೊಂಡಿದ್ದಾನೆ. ಉಳಿದ ಎರಡು ಪ್ರಕರಣಗಳ ತೀರ್ಪು ಬಾಕಿಯಿದೆ.

Comments are closed.