ಮೈಸೂರು: ಹಿಜಾಬ್ ವಿವಾದದಿಂದಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶವಾಗುವುದು ಖಚಿತ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಕಾಂಗ್ರೆಸ್ ಸರ್ವನಾಶ ಉಡುಪಿಯಿಂದಲೇ ಆರಂಭವಾಗಿದೆ ಎಂದು ಅವರು ಹೇಳಿದರು.ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಮುಖಂಡರು ಹಿಜಾಬ್ ವಿವಾದ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ ಅವರು ಅವರು ಮನಸ್ಸು ಮಾಡಿದ್ದರೆ ಸಮಸ್ಯೆ ಬಗೆಹರಿಸಬಹುದಿತ್ತು. ಆ ಆರು ವಿದ್ಯಾರ್ಥಿನಿಯರಿಗೆ ತಿಳಿವಳಿಕೆ ನೀಡಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್‌ಗೆ ಮುಸ್ಲಿಂ ಮತಗಳೇ ಮುಖ್ಯವಾಗಿವೆ. ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಹಿಂದೆ ವೀರಶೈವ–ಲಿಂಗಾಯತ ಧರ್ಮ ನಂತರ ಮತಾಂತರದ ವಿಷಯ, ಗೋಹತ್ಯೆ, ಈಗ ಹಿಜಾಬ್ ಅವರ ರಾಜಕೀಯದ ವಿಚಾರವಾಗಿದೆ. ಹಿಂದೂ ಮುಸ್ಲಿಂ ಒಡೆದಿದ್ದು ಕಾಂಗ್ರೆಸ್. ಅಪವಾದ ಮಾತ್ರ ಬಿಜೆಪಿ ಮೇಲೆ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಾನು ಎರಡನೇ ಅಂಬೇಡ್ಕರ್ ಅಂತ ಹೇಳಿಕೊಳ್ಳುತ್ತಾರೆ. ಅವರಿಗೆ ಸಂವಿಧಾನ, ಕಾನೂನು ಗೊತ್ತಿಲ್ಲವಾ? ಎಂದು ಪ್ರಶ್ನಿಸಿದರು. ಕೇರಳದ ಹೈಕೋರ್ಟ್ ಹಿಜಾಬ್ ವಿಚಾರದಲ್ಲಿ ಏನು ಹೇಳಿದೆ ಎಂದು ಸಿದ್ದರಾಮಯ್ಯ ಓದಿಕೊಳ್ಳಲಿ. ಸರ್ಕಾರ ಆದೇಶ ಮಾಡಿದೆ ಈ ಬಗ್ಗೆ ಕಾಂಗ್ರೆಸ್ ನಿಲುವನ್ನು ಸ್ಪಷ್ಟಪಡಿಸಬೇಕು. ಕಾನೂನು ಪಾಲನೆ ಮಾಡಬೇಕೋ ಬೇಡವೋ ಸಿದ್ದರಾಮಯ್ಯ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ಹಿಜಾಬ್ ಧರಿಸಿ ಅಧಿವೇಶನಕ್ಕೆ ಬರುವೆ ಎಂಬ ಕಲಬುರಗಿ ಶಾಸಕಿ ಖನೀಜಾ ಫಾತಿಮಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಧಮ್ ಇದ್ದರೆ ಮಸೀದಿಗೆ ಮುಸ್ಲಿಂ ಮಹಿಳೆಗೆ ಪ್ರವೇಶ ಕೊಡಿಸಿ ಎಂದು ಸವಾಲೆಸೆದರು.
ಹಿಜಾಬ್ ಹಾಕಿಕೊಂಡು ಅಧಿವೇಶನಕ್ಕೆ ಬರುವುದಲ್ಲ. ನೀವು ಮೊದಲು ಮಸೀದಿಗೆ ಹೋಗಿ. ಎಷ್ಟು ಜನ ಮಹಿಳೆಯರು ಮಸೀದಿಗೆ ಹೋಗಲು ಅವಕಾಶ ಇದೆ? ನಾವು ಶಾಲೆಗೆ ಮಾತ್ರ ಹಿಜಾಬ್ ನಿಷೇಧಿಸಿದ್ದೇವೆ. ಹೊರಗಡೆ ನಿಷೇಧ ಮಾಡಿಲ್ಲ. ಎಲ್ಲಾ ಕಡೆ ಹಾಕಿಕೊಂಡು ಹೋಗಬಹುದು ಎಂದರು.
ಸಿ.ಎಂ.ಇಬ್ರಾಹಿಂ ಹಿಜಾಬ್ ಕುರಿತು ನೀಡಿರುವ ಹೇಳಿಕೆ ಮಹಿಳೆಯರಿಗೆ ಮಾಡಿದ ಅವಮಾನ. ಮುಖ ನೋಡಲು ಹಿಜಾಬ್ ನಿಷೇಧ ಮಾಡಿಲ್ಲ. ಬದಲಿಗೆ, ಸಮವಸ್ತ್ರದ ನೀತಿಗೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರು.
Comments are closed.