ಮಡಿಕೇರಿ: ನಕಲಿ ಚಿನ್ನ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ.

(ಸಾಂದರ್ಭಿಕ ಚಿತ್ರ)
ಕೊಡಗು ಜಿಲ್ಲೆಯ ನಾಪೋಕ್ಲು ನಗರದ ನಂದಿ ಚಿನ್ನದಂಗಡಿಗೆ ಮೂವರು ವ್ಯಕ್ತಿಗಳು ಬಂದು ನಕಲಿ ಚಿನ್ನವನ್ನು ಗಿರವಿ ಇಟ್ಟು ಮುಂಗಡವಾಗಿ 20 ಸಾವಿರ ಹಣವನ್ನು ಪಡೆದುಕೊಂಡಿದ್ದು,ಅನುಮಾನಗೊಂಡ ಅಂಗಡಿ ಮಾಲೀಕ ಪರೀಕ್ಷಿಸಿದಾಗ 22 ಕ್ಯಾರೆಟ್ ಚಿನ್ನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತಾಮ್ರವನ್ನು ಸೇರಿಸಿರುವುದು ಕಂಡು ಬಂದಿದೆ. ಈ ವೇಳೆಗೆ ಮೂವರು ಆರೋಪಿಗಳು ಅಂಗಡಿಯಿಂದ ಪರಾರಿಯಾಗಿದ್ದು ಅಂಗಡಿ ಮಾಲೀಕರು ನಾಪೋಕ್ಲು ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದರು.

ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪರವರ ನೇತೃತ್ವದಲ್ಲಿ ನಾಪೋಕ್ಲು ಠಾಣಾ ಪಿಎಸ್ಐ ಆರ್.ಕಿರಣ್ ಹಾಗೂ ಎಎಸ್ಐ ಕುಶಾಲಪ್ಪ ಮತ್ತು ಸಿಬ್ಬಂದಿಗಳಾದ ಬಿ.ಕೆ ಮೋಹನ್, ಎಸ್.ಕೆ.ಗಣೇಶ್, ರವಿ, ಸಾಜನ್, ರಾಮಕೃಷ್ಣ, ನವೀನ್, ಹರ್ಷ, ಆಶಿಕ್, ಗಿರೀಶ್ ಮತ್ತು ಚಾಲಕ ಶರೀಫ್ ಒಳಗೊಂಡ ತಂಡವು ಓರ್ವ ಸ್ಥಳೀಯ ಮತ್ತು ಇಬ್ಬರು ಪರಸ್ಥಳೀಯ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಹೊಂಡಾ ಅಮೇಜ್ ಕಾರು ಮತ್ತು ಅಂದಾಜು ರೂ.1,20,000 ಬೆಲೆಬಾಳುವ ಚಿನ್ನವನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಎಸ್ಪಿ ಪ್ರಶಂಸಿಸಿದ್ದಾರೆ.
ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳಿಂದ ಚಿನ್ನಾಭರಣವನ್ನು ಖರೀದಿಸಬಾರದು ಮತ್ತು ನಕಲಿ ಚಿನ್ನವನ್ನು ಮಾರಾಟ ಮಾಡುವ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
Comments are closed.