ಉಡುಪಿ: ಉಡುಪಿ ಜಿಲ್ಲೆಯ ಭತ್ತದ ಬೆಳೆಗಾರ ರೈತರು ಭತ್ತಕ್ಕೆ 2500 ರೂ. ಬೆಂಬಲ ಬೆಲೆ ಘೋಷಣೆ ಮಾಡುವಂತೆ ಒತ್ತಾಯಿಸಿ ಬ್ರಹ್ಮಾವರ ಬಸ್ ನಿಲ್ದಾಣದ ಬಳಿಯಲ್ಲಿ ಜರುಗಿದ ಹೋರಾಟ ಸಭೆಗೆ ಬಾರಿ ಬೆಂಬಲ ವ್ಯಕ್ತವಾಗಿದೆ. ಇದೇ ವೇಳೆ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರೈತ ಬೆಳೆದ ಭತ್ತವನ್ನು ಹಡಿಮಂಚದಿಂದ ಬಡಿಯುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು.

ಪಕ್ಷಾತೀತವಾಗಿ ನಡೆದ ಈ ಸಭೆಯಲ್ಲಿ ರೈತರು ಮತ್ತು ರೈತ ಮುಖಂಡರುಗಳು, ರೈತ ಪರ ಸಂಘಟನೆಗಳ ಸಹಿತ ಸಹಸ್ರಾರು ಮಂದಿ ಭಾಗವಹಿಸಿ ನೈಜ ಸಮಸ್ಯೆಯನ್ನು ಹೊರಹಾಕಿದರು.
ಈ ಸಂದರ್ಭ ಬಾಳೆಕುದ್ರು ಶ್ರೀ ಮಠದ ನೃಸಿಂಹಾಶ್ರಮ ಸ್ವಾಮೀಜಿಯವರು ಮಾತನಾಡಿ, ದೇಶದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ರೈತ ಬೆಳೆದ ಬೆಳೆಯ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ. ರೈತನಿಗೆ ತಾವು ಬೆಳೆದ ಬೆಳೆಗೆ ಸರಕಾರ ಬೆಂಬಲ ಬೇಲೆ ನೀಡುವುದರಲ್ಲಿ ಸರಕಾರಕ್ಕೆ ನಷ್ಟ ಇರುವುದಿಲ್ಲ ಎಂದರು.
ಈ ತನಕ ರೈತರ ಹೆಸರು ಹೇಳಿ ಪ್ರತಿಜ್ಞಾ ವಿಧಿ ಹೇಳಿ ಅಧಿಕಾರ ಪಡೆದು ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತಾ ಬಂದವರೆ ಹೊರತು ರೈತರ ಹಿತಾಸಕ್ತಿ ಕಾಪಾಡುವ ವ್ಯಕ್ತಿಗಳು ಬಂದಿಲ್ಲ . ಕರಾವಳಿಯ ತುಂಡು ಭೂಮಿಯ ರೈತರಿಗೆ ಪ್ರತ್ಯೇಕವಾದ ರೈತ ನೀತಿ ಬೇಕು ಇದಕ್ಕೆ ಸರಕಾರ ಸ್ಫಂದಿಸ ಬೇಕು ಎಂದು ಹೇಳಿ ಇಲ್ಲಿನ ರೈತರ ಎಲ್ಲಾ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದರು.
ಇದೇ ಸಂದರ್ಭ ಅನೇಕರು ಕರಾವಳಿಯ ರೈತರ ಮತ್ತು ಭತ್ತದ ಬೆಳೆಗಾರರ ಸಮಸ್ಯೆಯ ಕುರಿತು ಮಾತನಾಡಿದರು. ಬಳಿಕ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿಯವರೀಗೆ ಸರಕಾರದ ಮತ್ತು ಆಡಳಿತ ಗಮನ ಸೆಳೆಯುವಂತೆ ಮನವಿ ನೀಡಲಾಯಿತು.
ಈ ಸಂದರ್ಭ ವಸಂತ ಗಿಳಿಯಾರು, ಆಲ್ವಿನ್ ಅಂದ್ರಾದೆ, ಬಾರಕೂರು ಶಾಂತಾರಾಮ ಶೆಟ್ಟಿ , ಭುಜಂಗ ಶೆಟ್ಟಿ, ವಸಂತ ಶೆಟ್ಟಿ , ಸತ್ಯನಾರಾಯಣ ಉಡುಪ ಸೇರಿದಂತೆ ಅನೇಕರು, ರೈತ ಮುಖಂಡರುಗಳು ಭಾಗವಹಿಸಿದ್ದರು.
Comments are closed.