ಕರ್ನಾಟಕ

ಪಾಲಿಕೆ ಕದನ: ಮತಎಣಿಕೆ‌ ಪ್ರಕ್ರಿಯೆ ಬಿರುಸು; ಬೆಳಗಾವಿಯಲ್ಲಿ ಪಕ್ಷೇತರರು, ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಮೇಲುಗೈ

Pinterest LinkedIn Tumblr

ಬೆಂಗಳೂರು: 3 ನಗರಗಳ ಮಹಾನಗರ ಪಾಲಿಕೆ ಚುನಾವಣಾ ಮತ ಎಣಿಕೆ ಕಾರ್ಯ ಬೆಳಗ್ಗೆನಿಂದ ನಡೆಯುತ್ತಿದೆ. ಬೆಳಗಾವಿಯಲ್ಲಿ ಪಕ್ಷೇತರರು ಮತ್ತು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯ ಒಟ್ಟು 58 ಕ್ಷೇತ್ರಗಳ ಪೈಕಿ 12 ವಾರ್ಡುಗಳಲ್ಲಿ ಬಿಜೆಪಿ, 7 ವಾರ್ಡ್ ಗಳಲ್ಲಿ ಕಾಂಗ್ರೆಸ್ ಹಾಗೂ 18 ವಾರ್ಡ್ ಗಳಲ್ಲಿ ಪಕ್ಷೇತರರು ಮುನ್ನಡೆ ಸಾಧಿಸಿದ್ದಾರೆ.

ಗೆಲುವಿನ ಖಾತೆ ತೆರೆದ ಬಿಜೆಪಿ, ಎಂಇಎಸ್
15ನೇ ವಾರ್ಡ್ ನಲ್ಲಿ ಬಿಜೆಪಿಯ ನೇತ್ರಾವತಿ ವಿನೋದ ಭಾಗವತ್, ವಾರ್ಡ್ ನಂಬರ್ 14 ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯ ಶಿವಾಜಿ ಮಂಡೋಳಕರ್ ಮತ್ತು ವಾರ್ಡ್ ನಂಬರ್ 40ರಲ್ಲಿ ಬಿಜೆಪಿಯ ಹೇಮಾ ಕಾಮ್ಕರ್ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂಬರ್ 18ರಲ್ಲಿ ಎಐಎಂಐಎಂ ಅಭ್ಯರ್ಥಿ ಶಾಹಿಖಾನ್ ಪಠಾಣ್ ಗೆಲುವು ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ. ನಂಬರ್ 11 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಮಿವುಲ್ಲಾ ಮಾಡೆವಾಲೆ ಗೆಲುವು ಸಾಧಿಸಿದ್ದಾರೆ.

ಬೆಳಗಾವಿ ವಾರ್ಡ್ ನಂಬರ್ 02 ರ ಕಾಂಗ್ರೆಸ್ ಅಭ್ಯರ್ಥಿ ಮುಜಮಿಲ್ ಡೋನಿಗೆ ಗೆಲುವು. ಆ ಮೂಲಕ ಸತತ ಮೂರನೇ ಬಾರಿಗೆ ಮುಜಮಿಲ್ ಡೋನಿ ಆಯ್ಕೆಯಾದಂತಾಗಿದೆ. ಬೆಳಗಾವಿ ವಾರ್ಡ್ ನಂಬರ್ 12ರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗೆ ಜಯ ಲಭಿಸಿದ್ದು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮೋದಿನಸಾಬ್ ಮತವಾಲೆ ಜಯಭೇರಿ ಭಾರಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಮೇಲುಗೈ
ಇತ್ತ ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದು, ಒಟ್ಟು 82 ವಾರ್ಡ್ ಗಳ ಪೈಕಿ 21ರಲ್ಲಿ ಬಿಜೆಪಿ, 10ರಲ್ಲಿ ಕಾಂಗ್ರೆಸ್, ಒಂದರಲ್ಲಿ ಇತರರು ಮುನ್ನಡೆ ಸಾಧಿಸಿದ್ದಾರೆ. ಈ ಪೈಕಿ 42 ನೇ ವಾರ್ಡ್​ನಿಂದ ಸ್ಪರ್ಧಿಸಿದ ಮಹಾದೇವಪ್ಪ ನರಗುಂದ ಅವರು ಗೆಲುವಿನ ನಗೆ ಬೀರಿದ್ದಾರೆ.

ಕಲಬುರಗಿಯ 5 ವಾರ್ಡ್ ಗಳಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ 3ರಲ್ಲಿ ಬಿಜೆಪಿ, 1ರಲ್ಲಿ ಕಾಂಗ್ರೆಸ್ ಮತ್ತು 1ರಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಕಲಬುರಗಿಯ ವಾರ್ಡ್ ನಂಬರ್ 1 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಥಲಿ ಬೇಗಂ ಜಯ ಗಳಿಸಿದ್ದಾರೆ.

Comments are closed.