ಕುಂದಾಪುರ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನ ಪಡೆಯುವ ಮೂಲಕ ಮೂರನೇ ಬಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕೊಡಗು ಜಿಲ್ಲೆ ಪ್ರವಾಸ ಕೈಗೊಂಡು ಶುಕ್ರವಾರ ಹುಟ್ಟೂರು ಕೋಟಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಸಾಸ್ತಾನ ಮಾಬುಕಳ, ಸಾಲಿಗ್ರಾಮ, ಹಾಗೂ ಕೋಟದಲ್ಲಿ ಬಿಜೆಪಿ ಮುಖಂಡರುಗಳು ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು.

ಮಳೆಯ ನಡುವೆಯೇ ಕೋಟ ಹಿರೇ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಾಲ್ನಡಿಗೆಯಲ್ಲಿ ಕೋಟ ಹಲವು ಮಕ್ಕಳ ತಾಯಿ ಅಮೃತೇಶ್ವರಿ ದೇವಸ್ಥಾನದವರೆಗೆ ಅಭಿಮಾನಿಗಳೊಂದಿಗೆ ಆಗಮಿಸಿದ ಸಚಿವರು ಕೋಟ ಅಮೃತೇಶ್ವರಿಗೆ ತಾಯಿಗೆ ಪೂಜೆ ಸಲ್ಲಿಸಿದರು. ಈ ಮೊದಲು ಕೋಟ ಜಾಮಿಯಾ ಮಸೀದಿಯ ಕಮಿಟಿ ಹಾಗೂ ಊರ ಮುಸ್ಲಿಂ ಬಾಂಧವರಿಂದ ಅದ್ದೂರಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ವಿಠಲ್ ಪೂಜಾರಿ ಐರೋಡಿ, ಕೋಡಿ, ಐರೋಡಿ, ಕೋಟತಟ್ಟು, ಕೋಟ ಗ್ರಾಮಪಂಚಾಯತ್ ಜನಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ, ಮುಖಂಡರಾದ ಕರಣ ಪೂಜಾರಿ, ರವೀಂದ್ರ ತಿಂಗಳಾಯ, ಪ್ರಸಾದ ಪೂಜಾರಿ, ಅಮೃಥೇಶ್ವರಿ ದೇವಸ್ಥಾನ ಆಡಳಿತ ಮಂಡಳಿಯವರು ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೇಲ್ಮನೆಯಲ್ಲಿ ಸಭಾ ನಾಯಕನಾಗಿ ಹಲವು ವರ್ಷ ಕೆಲಸ ಮಾಡಿದ ಮಾನದಂಡದಲ್ಲಿ ಪಕ್ಷದ ನಾಯಕರು, ಅಧ್ಯಕ್ಷರು, ಮುಖ್ಯಮಂತ್ರಿಗಳು, ವರಿಷ್ಟರು, ಸಂಘಟನೆಯವರು ಮತ್ತೊಮ್ಮೆ ಅವಕಾಶ ನೀಡಿದ್ದಾರೆ. ಮುಂದೆಯೂಬಕೂಡ ಸರಕಾರ ಮತ್ತು ಇಲಾಖೆಯಿಂದ ಜನಸಾಮಾನ್ಯರಿಗೆ ಸಹಾಯ ಮಾಡುವ ಕೆಲಸ ಮಾಡುವೆ. ಪ್ರಧಾನಿಯವರ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತದ ಪರಿಕಲ್ಪನೆಯನ್ನು ನನಸು ಮಾಡಲು ಶಕ್ತಿಮೀರಿ ಕೆಲಸ ಮಾಡಲಾಗುತ್ತದೆ. ಯಾವುದೆ ಇಲಾಖೆ ನೀಡಿದರೂ ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದರು. ಕೊರೋನಾ ಹಾಗೂ ಪ್ರವಾಹ ಸಮಸ್ಯೆ ನಿವಾರಣೆ ಹಿನ್ನೆಲೆ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ನೇಮಿಸಿ ಮುಖ್ಯಮಂತ್ರಿಗಳು ಆದೇಶ ನೀಡಿದ್ದು ನನಗೆ ಕೊಡಗು ಜಿಲ್ಲೆಗೆ ನೇಮಿಸಿದ್ದು ಉಸ್ತುವಾರಿ ಮಂತ್ರಿಯಾಗಿ ನೇಮಿಸಿಲ್ಲ ಎಂಬ ಭಾವನೆಯಿದೆ.
ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳು ಹಾಗೂ ಪಕ್ಷದ ಅಧಿಕಾರವಾಗಿದ್ದು ಬಹುತೇಕರಿಗೆ ತಾವು ಹಿರಿಯರು ಪಕ್ಷ ಸಚಿವ ಸ್ಥಾನ ನೀಡಬೇಕೆಂಬ ಆಪೇಕ್ಷೆಯಿರುವುದು ಸ್ವಾಭಾವಿಕ. ಆದರೆ ಇದನ್ನು ತೀರ್ಮಾನಿಸುವುದು ಪಕ್ಷ. ಯಾರಿಗೆ ಸಚಿವ ಸ್ಥಾನ ಸಿಗಲಿಲ್ಲವೋ ಅದರ ಬಗ್ಗೆ ಪಕ್ಷದ ಹಿರಿಯರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.