ಕುಂದಾಪುರ: ಉಡುಪಿ ಜಿಲ್ಲೆಯ ಕೋಟ ವಿವೇಕ ಶಿಕ್ಷಣ ಸಂಸ್ಥೆಗಳ ಎದುರುಗಡೆಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ (ಕೋಟ ಮೂರ್ಕೈ) ಪಾದಚಾರಿಗಳ ಅವಶ್ಯಕತೆಗಾಗಿ ಮೇಲ್ಸೆತುವೆ ನಿರ್ಮಾಣಕ್ಕೆ ಒತ್ತಾಯಿಸಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಪತ್ರ ಬರೆದಿದ್ದಾರೆ.

ಉಡುಪಿ ಜಿಲ್ಲೆಯ ಕೋಟದಲ್ಲಿ ವಿವೇಕ ಶಿಕ್ಷಣ ಸಂಸ್ಥೆಗಳಲ್ಲಿ ಅಂದಾಜು ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಈ ಶಿಕ್ಷಣ ಸಂಸ್ಥೆಗೆ ಬರುವ ಶೇ.೮೦ ಕ್ಕೂ ಅಧಿಕ ವಿದ್ಯಾರ್ಥಿಗಳು ಬಸ್ಸಿನಲ್ಲಿ ಬರುತ್ತಿದ್ದಾರೆ. ಪ್ರತಿ ದಿನ ವಿದ್ಯಾರ್ಥಿಗಳು ಬಸ್ಸಿನಿಂದ ಇಳಿದು ರಾಷ್ಟ್ರೀಯ ಹೆದ್ದಾರಿ 66 ರನ್ನು ದಾಟಿ ಶಿಕ್ಷಣ ಸಂಸ್ಥೆಗೆ ಬರಲು ಪ್ರಯಾಸ ಪಡೆಬೇಕಾಗಿರುತ್ತದೆ.

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಶಾಲಾ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕ ಪಾದಚಾರಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಕೋಟ ವಿವೇಕ ಶಿಕ್ಷಣ ಸಂಸ್ಥೆಗಳ ಎದುರುಗಡೆಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆಯನ್ನು ದಾಟಲು ಒಂದು ಪಾದಚಾರಿ ಮೇಲ್ಸೆತುವೆ ನಿರ್ಮಿಸುವುದು ಅತ್ಯಂತ ಅವಶ್ಯಕವಾಗಿರುತ್ತದೆ. ಈ ಪ್ರದೇಶದ ಅರಿವಿರುವ ತಾವು, ಆದ್ಯತೆಯ ಮೇರೆಗೆ ಈ ವಿಷಯವನ್ನು ಪರಿಗಣಿಸಿ ಪಾದಚಾರಿ ಮೇಲ್ಸೆತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಶಾಸಕರು ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.
Comments are closed.