ಕರಾವಳಿ

ಮನಪಾ ಅಧಿಕಾರಿಗಳ ಹೆಸರಿನಲ್ಲಿ ಬಟ್ಟೆ ಅಂಗಡಿಗೆ ದಾಳಿ : ಹಣ ವಸೂಲಿಗೆ ಯತ್ನ – ಓರ್ವ ಹ್ಯೂಮನ್ ರೈಟ್ಸ್ ಕಾರ್ಯಕರ್ತ ಸೆರೆ

Pinterest LinkedIn Tumblr

ಮಂಗಳೂರು  : ನಗರದ ಟೋಕಿಯೋ ಮಾರ್ಕೆಟ್‌ನಲ್ಲಿರುವ ಬಟ್ಟೆ ಅಂಗಡಿಯೊಂದಕ್ಕೆ ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡು ಬಂದು ಹಣ ವಸೂಲು ಮಾಡಲು ಯತ್ನಿಸಿದ ಆರೋಪದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಅಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡು ಬಟ್ಟೆ ಅಂಗಡಿಗೆ ನುಗ್ಗಿದ ಮೂವರ ತಂಡ 50 ಸಾವಿರ ಹಣ ನೀಡುವಂತೆ ಬ್ಲಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ನಗರದ ಬಂದರು ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಹ್ಯೂಮನ್ ರೈಟ್ಸ್ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದು, ಬಂಧಿತನನ್ನು ದೀಪಕ್ ರಾಜೇಶ್ ಕುವೆಲ್ಲೋ (45) ಎಂದು ಹೆಸರಿಸಲಾಗಿದೆ.

ಟೋಕಿಯೊ ಮಾರ್ಕೆಟ್‌ನಲ್ಲಿರುವ ಸಾಗರ್ ಕಲೆಕ್ಷನ್ ಬಟ್ಟೆ ಅಂಗಡಿಗೆ ಜೂನ್16ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಭೇಟಿ ನೀಡಿದ ಮೂವರು, ತಾವು ಪಾಲಿಕೆ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಲಾಕ್‌ಡೌನ್ ವೇಳೆ ಅಂಗಡಿ ತೆರೆದಿರುವುದಕ್ಕೆ 50,000 ರೂ. ನೀಡುವಂತೆ ಒತ್ತಾಯಿಸಿದ್ದಾರೆ.

ಇದಕ್ಕೆ ಒಪ್ಪದಿದ್ದಾಗ ಎಲ್ಲ ಸರಿ ಮಾಡುವುದಾಗಿ ಹೇಳಿ 10,000 ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಅಧಿಕಾರಿಗಳ ಹೆಸರಿನಲ್ಲಿ ಬಂದಿದ್ದ ತಂಡ ಹಣ ಕೊಡದೇ ಅಲ್ಲಿಂದ ತೆರಳಲು ಕೇಳಲಿಲ್ಲ. ಕೊನೆಗೆ ಹತ್ತು ಸಾವಿರ ಹಣ ಕೊಡಿ ಎಂದು ಬಿಲ್ ಬರೆಯಲು ಮುಂದಾಗಿದ್ದು, ಅವರ ಬಳಿ ಮಹಾನಗರ ಪಾಲಿಕೆಯ ರಶೀದಿ ಇಲ್ಲದಿರುವುದನ್ನು ಗಮನಿಸಿದ ಸುತ್ತಮುತ್ತಲಿದ್ದ ಕೆಲವರು ಸಹಾಯಕ್ಕೆ ಆಗಮಿಸಿ ಅವರು ಮನಪಾ ಅಧಿಕಾರಿಗಳು ಅಲ್ಲವೆಂದು ಖಚಿತಪಡಿಸಿದ್ದಾರೆ.

ಈ ರೀತಿ ಅಧಿಕಾರಿಗಳ ಸೋಗಿನಲ್ಲಿ ಬಂದ ಮಂಗಳೂರಿನ ದೀಪಕ್ ರಾಜೇಶ್ ಕುವೆಲ್ಲೋ, ತೌಸೀಫ್ ಖಲಂದರ್ ಮತ್ತು ರಿಯಾಝ್ ಎಂಬವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಂಗಡಿ ಮಾಲಕ ಅಬ್ದುಲ್ ರಹಿಮಾನ್ ಎಂಬವರು ಬಂದರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿ ತೆರೆಯಲು ಅವಕಾಶವಿಲ್ಲ. ಹಾಗಾಗಿ ಬೆಳಗ್ಗಿನ ಕರ್ಫ್ಯೂ ಸಡಿಲಿಕೆ ಅವಧಿಯಲ್ಲಿ ಕೆಲಸದವರಿಗೆ ವೇತನವನ್ನು ಬ್ಯಾಂಕ್ ಅಕೌಂಟಿಗೆ ಹಾಕುವ ಉದ್ದೇಶದಿಂದ ತಾನು ಇಂದು ಬೆಳಗ್ಗೆ ಅಂಗಡಿ ಬಾಗಿಲು ತೆರೆದಿದ್ದಾಗಿ ದೂರಿನಲ್ಲಿ ಅಬ್ದುಲ್ ರಹಿಮಾನ್ ಉಲ್ಲೇಖಿಸಿದ್ದಾರೆ.

ದೂರು ಬಂದ ಹಿನ್ನೆಲೆಯಲ್ಲಿ ಕೂಡಲೇ ಬಂದರು ಠಾಣೆ ಪೊಲೀಸರು ಆಗಮಿಸಿ ಅಲ್ಲಿದ್ದ ದೀಪಕ್ ರಾಜೇಶ್ ಕುವೆಲ್ಲೋನನ್ನು ಬಂಧಿಸಿದ್ದು, ಆತನೊಂದಿಗಿದ್ದ ತೌಫಿಕ್ ಕಲಂದರ್ ಮತ್ತು ರಿಯಾಜ್ ಎಂಬ ಇಬ್ಬರು ಪೊಲಿಸರನ್ನು ನೋಡಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಯುಕ್ತರು ತಿಳಿಸಿದ್ದಾರೆ.

ದೀಪಕ್ ರಾಜೇಶ್ ಕುವೆಲ್ಲೋ ಪೆರ್ಮನ್ನೂರು ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ಆಧುನಿಕ ಹ್ಯೂಮನ್ ರೈಟ್ಸ್ ಎನ್ನುವ ಸಂಘಟನೆಯ ಹೆಸರಿನಲ್ಲಿ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Comments are closed.