ಕರಾವಳಿ

ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಪೂರೈಸಲು ಡಾ.ಕುಮಾರ್ ಸೂಚನೆ

Pinterest LinkedIn Tumblr

ಮಂಗಳೂರು, ಜೂನ್ 18 : ಜಿಲ್ಲೆಯ ರೈತರ ಅವಶ್ಯಕತೆಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಪೂರೈಕೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ತಿಳಿಸಿದರು.

ಅವರು ತಮ್ಮ ಕಚೇರಿ ಸಭಾಂಗಣದಲ್ಲಿ 2021-22ನೇ ಸಾಲಿನ ಮುಂಗಾರು ಅಂಗಾಮಿನ ಕೃಷಿ ಚಟುವಟಿಕೆಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪೂರ್ವಸಿದ್ಧತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡುತ್ತಿದ್ದರು.
ಜಿಲ್ಲೆಯಲ್ಲಿ ಮುಂಗಾರು ಮಳೆಯು ಉತ್ತಮವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿದ್ದು ರೈತರಿಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ವಿತರಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕೆಂದರು.

ಜಿಲ್ಲೆಯಲ್ಲಿ ಈ ಬಾರಿ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತಬಿತ್ತನೆಗೆ ಗುರಿ ಹಮ್ಮಿಕೊಳ್ಳಲಾಗಿದೆ, ಎಮ್.ಓ.ಫೋರ್ ಭತ್ತದ ಬೀಜಕ್ಕೆ ಹೆಚ್ಚಿನ ಬೇಡಿಕೆಯು ಜಿಲ್ಲೆಯಲ್ಲಿದೆ, ಒಂದೊಮ್ಮೆ ಪೂರ್ತಿ ಪ್ರಮಾಣದಲ್ಲಿ ಪೂರೈಸಲು ಆಗದೆ ಇರುವ ಸಂದರ್ಭದಲ್ಲಿ ಅದೇ ತಳಿಯ ಇತರೆ ಭತ್ತದ ಬೀಜಗಳನ್ನು ಪೂರೈಸಬೇಕು ಎಂದರು.

ಜಿಲ್ಲೆಗೆ 12 ಸಾವಿರ ಟನ್‍ಗಳಷ್ಟು ರಸಗೊಬ್ಬರದ ಅವಶ್ಯಕತೆಗಳಿದ್ದು, ಈಗಾಗಲೇ 6ಸಾವಿರ ಟನ್‍ಗಳಷ್ಟು ವಿವಿಧ ನಮೂನೆಯ ರಸಗೊಬ್ಬರಗಳು ಪೂರೈಕೆ ಆಗಿದೆ, 3 ಸಾವಿರ ಟನ್‍ಗಳಷ್ಟು ವಿತರಿಸಲಾಗಿದೆ ಎಂದರು.

ಬಿತ್ತನೆ ಬೀಜ ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಿದ್ದರೆ ಅಥವಾ ಸರಕಾರ ನಿಗಧಿ ಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದ ಅವರು ಗೊಬ್ಬರ ಮಾರಾಟ ಕೇಂದ್ರಗಳಲ್ಲಿ ಗೊಬ್ಬರದ ದರಗಳನ್ನು ಫಲಕದಲ್ಲಿ ಪ್ರದರ್ಶಿಸಬೇಕು ಎಂದರು.

ಹೋಬಳಿ ಮಟ್ಟದ ಎಲ್ಲಾ ರೈತ ಸಂಪರ್ಕ ಕೇಂದ್ರಗಳನ್ನು ಲಾಕ್‍ಡೌನ್ ಸಂದರ್ಭಲ್ಲಿಯೂ ನಿಗದಿತ ಅವಧಿಗೆ ತೆರೆದು ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ಗೊಬ್ಬರ ಸೇರಿದ್ದಂತೆ ಮತ್ತಿತ್ತರ ಪರಿಕರಗಳನ್ನು ರಿಯಾಯಿತಿ ದರದಲ್ಲಿ ವಿತರಿಸುವಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಅಂದಾಜು 2,076 ಎಕರೆಯಷ್ಟು ಹಡಿಲು ಜಮೀನುಗಳು ಇದ್ದು ಇವುಗಳಲ್ಲಿ ರೈತರು ಬೆಳೆ ಬೆಳೆಯುವಂತೆ ಉತ್ತೇಜಿಸುವ ಕೆಲಸವನ್ನು ಕೃಷಿ ಇಲಾಖೆಯ ಅಧಿಕಾರಿಗಳು ಮಾಡಬೇಕು ಎಂದರು.

ಬಿತ್ತನೆ ಬೀಜ ರಸಗೊಬ್ಬರ ಹಾಗೂ ಮತ್ತಿತ್ತರ ಪರಿಕರಗಳ ದಾಸ್ತಾನುಗಳ ಬಗ್ಗೆ ರೈತರಿಗೆ ತಿಳಿಸುವುದರ ಜೊತೆಗೆ ರೈತ ಮುಖಾಂಡರ ಸಭೆಗಳನ್ನು ಮಾಡಬೇಕು ಎಂದು ತಿಳಿಸಿದರು.

ಕೃಷಿ ಪರಿಕರಗಳ ಮಾರಾಟ ಕೇಂದ್ರಗಳಲ್ಲಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಕೆ ಹಾಗೂ ಸಾಮಾಜಿಕ ಅಂತರಗಳನ್ನು ಕಾಯ್ದುಕೊಳ್ಳುವಂತೆ ಎಚ್ಚರ ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮಂಗಳೂರು ಜಂಟಿ ಕೃಷಿ ನಿರ್ದೇಶಕಿ ಸೀತಾ ಎಮ್.ಸಿ, ಉಪಕೃಷಿ ನಿರ್ದೇಶಕ ಮಂಗಳೂರು ವಿಭಾಗ ಬಾನುಪ್ರಕಾಶ್, ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್, ಪುತ್ತೂರು ವಲಯ ಉಪ ಕೃಷಿ ನಿರ್ದೇಶಕ ಶಿವಶಂಕರ ದಾನೇಗೌಡ, ಬಂಟ್ವಾಳ ತಾಂತ್ರಿಕ ಅಧಿಕಾರಿ ನಂದನ್ ಶೆಣೈ, ಪುತ್ತೂರು ಸುಳ್ಯ ಸಹಾಯಕ ನಿರ್ದೇಶಕ ನಾರಾಯಣ ಶೆಟ್ಟಿ ಮತ್ತು ಬೆಳ್ತಂಗಡಿ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಉಪಸ್ಥಿತರಿದ್ದರು.

Comments are closed.