ಕರಾವಳಿ

ಕೆನಡಾಕ್ಕೆ ತೆರಳಲು ಯತ್ನ : ಮಂಗಳೂರಿನಲ್ಲಿ ಅಕ್ರಮ ವಾಸ್ತವ್ಯ ಹೊಂದಿದ್ದ ಶ್ರೀಲಂಕಾದ ಪ್ರಜೆಗಳ ಬಂಧನ

Pinterest LinkedIn Tumblr

ಮಂಗಳೂರು, ಜೂನ್.11 : ಆಕ್ರಮವಾಗಿ ಮಂಗಳೂರಿನಲ್ಲಿ ವಾಸವಾಗಿದ್ದ ಶ್ರೀಲಂಕಾದ ಪ್ರಜೆಗಳನ್ನು ಮಂಗಳೂರು ಪೊಲೀಸರು ಶುಕ್ರವಾರ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಶ್ರೀಲಂಕಾ ಮೂಲದ ಒಟ್ಟು 38 ಮಂದಿ ಪ್ರಜೆಗಳು ತಮಿಳುನಾಡು ಮೂಲಕ ಮಂಗಳೂರಿಗೆ ಬಂದು ಲಾಡ್ಜ್‌ಗಳಲ್ಲಿ ಆಶ್ರಯ ಪಡೆದಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕ್ಕಿದ್ದು, ಎಲ್ಲರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉದ್ಯೋಗ ಅರಸಿಕೊಂಡು ಕೆನಡಾಕ್ಕೆ ತೆರಳುವ ಯತ್ನದಲ್ಲಿದ್ದ ಶ್ರೀಲಂಕಾದ 38ಯನ್ನು ವಶಕ್ಕೆ ಪಡೆದು ಮಾರ್ಗಸೂಚಿ ಪ್ರಕಾರ ಕೋವಿಡ್ ತಪಾಸಣೆಗೊಳಪಡಿಸಿ ತಮಿಳುನಾಡು ಪೊಲೀಸರ ಸಹಕಾರದೊಂದಿಗೆ ಮುಂದಿನ ತನಿಖೆಯನ್ನು ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ವಶಕ್ಕೆ ಒಳಗಾದ ಮಂದಿ ಉತ್ತರ ಶ್ರೀಲಂಂಕಾ ಭಾಗದ ನಿವಾಸಿಗಳೆಂದು ಗುರುತಿಸಲಾಗಿದೆ. ಇವರಿಗೆ ಮಂಗಳೂರಿನಲ್ಲಿ ಆಶ್ರಯ ನೀಡಿದ ಸ್ಥಳೀಯರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಮಾನವ ಕಳ್ಳಸಾಗಾಟದ ಗಂಭೀರ ಪ್ರಕರಣ ಇದಾಗಿದ್ದು, ವಿದೇಶಿ ಪ್ರಜೆಗಳ ಅಕ್ರಮ ಪ್ರವೇಶ ಹಾಗೂ ವಾಸದ ಅಪರಾಧವೂ ಇದಾಗಿದೆ. ಇವರೆಲ್ಲರ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ವಿದೇಶಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಯುಕ್ತರು ತಿಳಿಸಿದ್ದಾರೆ.

Comments are closed.