ಕರಾವಳಿ

ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ 10ನೇ ತರಗತಿಯ ಪರೀಕ್ಷೆ ವಿಷಯದಲ್ಲಿ ಗೊಂದಲ : ವಿದ್ಯಾರ್ಥಿಗಳ ಭವಿಷ್ಯ ಕತ್ತಲಲ್ಲಿ- NSUI ಆರೋಪ

Pinterest LinkedIn Tumblr

ಮಂಗಳೂರು  : ದ್ವಿತೀಯ ಪಿಯುಸಿ ಪರೀಕ್ಷೆ ವಿಚಾರ ಹಾಗೂ 10ನೇ ತರಗತಿಯ ಪರೀಕ್ಷೆ ವಿಷಯದಲ್ಲಿ ಸರ್ಕಾರ ಅನೇಕ ಗೊಂದಲಕಾರಿ ನಿಲುವುಗಳನ್ನು ಕೈಗೊಂಡಿದೆ. ಸರ್ಕಾರದ ಈ ನಿರ್ಧಾರದಿಂದ ವಿದ್ಯಾರ್ಥಿಗಳ ಭವಿಷ್ಯ ಕ್ಕೆ ಕತ್ತಲು ಕವಿದಿದೆ ಎಂದು ರಾಜ್ಯ ಎನ್ ಎಸ್ ಯುಐ ಪ್ರಧಾನ ಕಾರ್ಯದರ್ಶಿ ಮನೀಶ್ ಜಿ. ರಾಜ್ ಆರೋಪಿಸಿದ್ದಾರೆ.

 ನಗರದ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಪಡಿಸಿದ್ದು, ಅದರ ನೀತಿ-ನಿಯಮ ಗೊಂದಲ ಉಂಟು ಮಾಡಿದೆ. 10ನೇ ತರಗತಿಯ ಪರೀಕ್ಷೆ ವಿಷಯದಲ್ಲಿ ಕೂಡ ಸರ್ಕಾರ ಅನೇಕ ಗೊಂದಲಕಾರಿ ನಿಲುವುಗಳನ್ನು ಕೈಗೊಳ್ಳುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಕತ್ತಲಲ್ಲಿದೆ. ಆದಷ್ಟು ಶೀಘ್ರದಲ್ಲಿ ಈ ಎರಡು ವಿಚಾರದಲ್ಲಿ ಸರ್ಕಾರ ಕೂಡಲೇ ಸರಿಯಾದ ನಿಲುಗಳನ್ನು ಕೈಗೊಂಡು ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಪುನಾವರ್ತನೆ ಮತ್ತು ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಬಗ್ಗೆ ಸರಕಾರ ಇನ್ನೂ ಕೂಡ ಸ್ಪಷ್ಟ ನಿಲುವನ್ನು ತಾಳದಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರು ಗೊಂದಲ ಉಂಟು ಮಾಡಿದೆ ಎಂದು ತಿಳಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ವಿದ್ಯಾರ್ಥಿಗಳ ಕಳೆದ ಸೆಮಿಸ್ಟರ್ ನ ಪರೀಕ್ಷೆಗಳನ್ನು ನಡೆಸದೆ ಮುಂದಿನ ಸೆಮಿಸ್ಟರ್ ನ ತರಗತಿಗಳನ್ನು ಆನ್ ಲೈನ್ ಮುಖಾಂತರ ಪ್ರಾರಂಭಿಸಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಓರ್ವ ವಿದ್ಯಾರ್ಥಿ ಎರಡೂ ಸೆಮಿಸ್ಟರ್ಗಳ ಪರೀಕ್ಷೆಯನ್ನ ಒಂದೇ ಸಮಯದಲ್ಲಿ ಬರೆಯುವಂತಾಗಿದ್ದು, ಕಳೆದ ಪದವಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಬೇಕು ಎಂದು ದ.ಕ.ಜಿಲ್ಲಾ ಎನ್ ಎಸ್ ಯುಐ ಅಧ್ಯಕ್ಷ ಸವಾದ್ ಸುಳ್ಯ ಆಗ್ರಹಿಸಿದರು.

ಎನ್ ಎಸ್ ಯುಐ ವಿಟಿಯು ಉಸ್ತುವಾರಿ ಅನ್ವೀತ್ ಕಟೀಲ್, ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಅಫೀದ್, ಜಿಲ್ಲಾ ಉಪಾಧ್ಯಕ್ಷ ನಿಖಿಲ್ ಪೂಜಾರಿ, ವರುಣ್ ಕುಮಾರ್, ಶಫೀಕ್, ಅಬ್ದುಲ್ ರಾಝೀ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.