
ಮಂಗಳೂರು : ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಸಂಘ ಪರಿವಾರ ಸಂಘಟನೆಯ ಕಾರ್ಯಕರ್ತರು ತಮ್ಮ ಪ್ರಾಣದ ಪರಿವೆಯೇ ಇಲ್ಲದೆ ಕೊರೊನಾ ಸೊಂಕಿನಿಂದ ಮೃತಪಟ್ಟ ದುರ್ದೈವಿಗಳ ಅಂತ್ಯಸಂಸ್ಕಾರದಲ್ಲಿ ಸಕ್ರಿಯವಾಗಿ ಸೇವಾ ನಿರತರಾಗಿದ್ದಾರೆ.
ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ ಅವರ ಅಧ್ಯಕ್ಷತೆಯ ಸಮಾಜಮುಖಿ ಸೇವಾಸಂಸ್ಥೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಜರಂಗದಳದ 25 ಕಾರ್ಯಕರ್ತ ಬಂಧುಗಳಿಗೆ 5 ಲಕ್ಷ ರೂಪಾಯಿ ಮೊತ್ತದ ಕೊರೊನಾ ಕವಚ್ ಜೀವವಿಮೆ ಪಾಲಿಸಿಯನ್ನು ಮಾಡಲಾಗಿದೆ.
ಅದರೊಂದಿಗೆ ಟ್ರಸ್ಟ್ ವತಿಯಿಂದ ಪಿಪಿಇ ಕಿಟ್ಸ್, ಕೈಕವಚ, ಸ್ಯಾನಿಟೈಜರ್ಸ್ ಮತ್ತು ಇತರ ಅಗತ್ಯ ಇರುವ ವಸ್ತುಗಳನ್ನು ನೀಡಲಾಯಿತು.

ಬಜರಂಗದಳದ ಕಾರ್ಯಕರ್ತರು ಕೊರೊನಾದಿಂದ ಮೃತಪಟ್ಟವರ ಮೃತದೇಹಗಳನ್ನು ಆಸ್ಪತ್ರೆಯಿಂದ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ವಿಧಿವತ್ತಾಗಿ ಅಂತ್ಯಸಂಸ್ಕಾರವನ್ನು ನಡೆಸಿ ಮೃತರ ಅಂತಿಮ ಪ್ರಯಾಣವು ಗೌರವಯುತವಾಗಿ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ.
ಇವರಿಗೆ ಜೀವವಿಮೆ ಮಾಡುವುದು ಅತ್ಯಗತ್ಯ ಎಂದು ಮನಗಂಡ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಅದರೊಂದಿಗೆ ಅಂತ್ಯಸಂಸ್ಕಾರಕ್ಕೆ ಅಗತ್ಯವಿರುವ ಸೌಕರ್ಯವನ್ನು ನೀಡಿ ಅವರ ಈ ಸೇವಾಕಾರ್ಯದಲ್ಲಿ ಕೈಜೋಡಿಸಿದೆ.

ಈಗಾಗಲೇ ಸ್ಮಶಾನದಲ್ಲಿ ಹೆಣ ಸುಡುವವರಿಗೆ ಮತ್ತು ಅವರ ಕುಟುಂಬದವರಿಗೆ ಟ್ರಸ್ಟ್ ವತಿಯಿಂದ ಪ್ರತ್ಯೇಕ ಜೀವವಿಮೆಯನ್ನು ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು. ಜೀವವಿಮಾ ಪಾಲಿಸಿಯ ದಾಖಲೆಗಳನ್ನು ಟ್ರಸ್ಟ್ ವತಿಯಿಂದ ಸಂಘಟನೆಯ ಪ್ರಮುಖರಾದ ಶರಣ್ ಪಂಪವೆಲ್, ಪುನೀತ್ ಪಂಪವೆಲ್ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಪ್ರಮುಖರಾದ ಹನುಮಂತ ಕಾಮತ್, ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್ ಹಾಗೂ ಬಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಇದರ ಇಂತಹ ಮಾದರಿ ಕಾರ್ಯಗಳಿಂದ ಸೇವಾಕಾರ್ಯದಲ್ಲಿ ನಿಸ್ವಾರ್ಥವಾಗಿ ನಿರತರಾಗಿರುವ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ಮೂಡುತ್ತದೆ ಎಂದು ಪ್ರಜ್ಞಾವಂತ ಸಮಾಜ ಮೆಚ್ಚುಗೆ ವ್ಯಕ್ತಪಡಿಸಿದೆ.
Comments are closed.