ಕರಾವಳಿ

ವರ್ಷಾಚರಣೆಯ ಸಂಭ್ರಮದಲ್ಲಿ ತುಳು ವೆಬಿನಾರ್ ಉಪನ್ಯಾಸ ಮಾಲಿಕೆ

Pinterest LinkedIn Tumblr

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಜಂಟಿ ಆಶ್ರಯದಲ್ಲಿ ಪ್ರತಿ ಶನಿವಾರ ನಡೆಯುತ್ತಿರುವ ಉಪನ್ಯಾಸ ಮಾಲಿಕೆ ಒಂದು ವರ್ಷ ಪೂರೈಸುತ್ತಿದೆ.

ನಿರಂತರವಾಗಿ 51 ವಾರಗಳ ಕಾಲ ನಡೆದು ಬಂದಿದ್ದು 52ನೇ ಸಂಚಿಕೆಯು ಮೇ 29 ರಂದು ಸಾಯಂಕಾಲ 5 ಗಂಟೆಗೆ ಜೂಮ್ ಆ್ಯಪ್ ನಲ್ಲಿ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭಾಗವಹಿಸಲಿದ್ದು, ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಉಪನ್ಯಾಸ ನೀಡಲಿದ್ದಾರೆ.

ಮಂಗಳೂರು ವಿ.ವಿ. ಕುಲಪತಿ ಪ್ರೊ. ಪಿ.ಎಸ್. ಯಡಿಪಡಿತ್ತಾಯ ಅಧ್ಯಕ್ಷತೆ ವಹಿಸಲಿದ್ದಾರೆ. ನ್ಯಾಯವಾದಿ ಎಂ.ಕೆ. ಸುವ್ರತ ಕುಮಾರ್ ಗೌರವ ಉಪಸ್ಥಿತರಿರುವರು.

ತುಳು ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಕಲಿಕೆಯು ಕೊರೋನಾದಿಂದ ಬಾಧಿತವಾದಾಗ ನಾಡಿನ ಭಾಷಾ ತಜ್ಞರು ಹಾಗೂ ವಿದ್ವಾಂಸರ ಮೂಲಕ ನಡೆದ ಈ ಉಪನ್ಯಾಸ ಮಾಲಿಕೆಯು ಕ್ರಮೇಣ ದೇಶ – ವಿದೇಶದ ತುಳುವರು ಭಾಗವಹಿಸಲು ಪ್ರೇರಣೆ ನೀಡಿತು.

25ನೇ ಸಂಚಿಕೆಯು ಬೊಳ್ಳಿ ಸಂಭ್ರಮದೊಂದಿಗೆ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪನ್ಯಾಸ ದ ಮೂಲಕ ನಡೆಯಿತು. ಎರಡು ವಾರಗಳ ಹಿಂದೆ ಸುವರ್ಣ ಸಂಭ್ರಮ ದೊಂದಿಗೆ ನಡೆಯಿತು.

ತುಳು ಭಾಷೆ ಹಾಗೂ ತುಳುನಾಡಿಗೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಹಲವಾರು ಮಗ್ಗುಲುಗಳಲ್ಲಿ ಉಪನ್ಯಾಸ ಚರ್ಚೆಗಳಯ ನಡೆದಿವೆ. ಉಪನ್ಯಾಸ ವಿಷಯವನ್ನು ಪುಸ್ತಕ ರೂಪದಲ್ಲಿ ಹೊರತರುವ ಉದ್ದೇಶವನ್ನು ಹೊಂದಲಾಗಿದೆ.

ಸಂಪನ್ಮೂಲ ಪುಸ್ತಕದ ಕೊರತೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಇದರಿಂದ ಪ್ರಸ್ತುತ ಹಾಗೂ ಮುಂದೆಯೂ ಅನುಕೂಲ ಒದಗಿಸುವ ಉದ್ದೇಶ ಮೆಚ್ಚುವಂತಹುದು.

ಕಾಲೇಜು ಪ್ರಾಂಶುಪಾಲರಾದ ಸುಭಾಷಿಣಿ ಶ್ರೀವತ್ಸ ಹಾಗೂ ವಿಭಾಗದ ಸಂಯೋಜಕರಾದ ಡಾ.ಮಾಧವ ಎಂ.ಕೆ. ಅವರ ಪ್ರೋತ್ಸಾಹದಿಂದ ನಡೆಯುತ್ತಿರುವ ಈ ಕಾರ್ಯಕ್ರಮ ತುಳು ವಿದ್ಯಾರ್ಥಿಗಳಿಗೆ ಕಲಿಕೆಗೆ ತುಂಬಾ ಪೂರಕವಾಗಿದೆ.

ಈ ಸಲದ ವರ್ಷಾಚರಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಭಾಗವಹಿಸಬಹುದೆಂದು ಸಂಯೋಜಕರು ತಿಳಿಸಿದ್ದಾರೆ.

Comments are closed.