ಆರೋಗ್ಯ

ಕೊರೊನಾದಿಂದ ಸಾವಿಗೀಡಾದ ಜನರ ನಿಜ ಲೆಕ್ಕವನ್ನು ಸರಕಾರ ಮುಚ್ಚಿಟ್ಟಿದೆ: ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ

Pinterest LinkedIn Tumblr

ಬೆಂಗಳೂರು: ರೋಗಿಗಳಿಗೆ ಆಕ್ಸಿಜನ್, ಐಸಿಯು ಹಾಸಿಗೆಗಳು, ಆಂಬುಲೆನ್ಸ್ ಗಳು ಅಗತ್ಯ ಸಮಯದಲ್ಲಿ ಸಿಗುತ್ತಿಲ್ಲ ಎಂದು ಸತ್ಯ ಹೇಳಿದರೆ ಬಿಜೆಪಿ ನಾಯಕರು ನಾನು ಟೀಕೆ ಮಾಡುತ್ತಿದ್ದೇನೆ ಅಂತಾರೆ. ಶವ ಸಂಸ್ಕಾರ ಮಾಡಲು ಕ್ಯೂನಲ್ಲಿ ನಿಲ್ಲಬೇಕಾದ, ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ಇದು ಸುಳ್ಳಾ? ಇದನ್ನು ಹೇಳಿದ್ರೆ ಟೀಕೆಯಾಗುತ್ತಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸರ್ಕಾರ ಕೊರೊನಾದಿಂದ ಸಾವಿಗೀಡಾದ ಜನರ ನಿಜ ಲೆಕ್ಕವನ್ನು ಮುಚ್ಚಿಟ್ಟು, ಜನರಿಗೆ ಸುಳ್ಳು ಹೇಳುತ್ತಿದೆ. ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಬಿಡುಗಡೆ ಮಾಡುವ ಮೃತರ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಸರ್ಕಾರ ಅಗತ್ಯ ವೈದ್ಯಕೀಯ ಸೌಲಭ್ಯ ನೀಡಿದ್ದರೆ ಜನ ಹೀಗೆ ಸಾಯುವ ಸನ್ನಿವೇಶ ಬರುತ್ತಿತ್ತಾ?

ಬಡ ರೈತನೊಬ್ಬನಿಗೆ “ಹೊಟ್ಟೆಗಿಲ್ಲದಿದ್ದರೆ ಸಾಯೋದೆ ಒಳ್ಳೆಯದು” ಎಂಬ ಉಡಾಫೆ ಉತ್ತರ ನೀಡಿರುವ ಉಮೇಶ್ ಕತ್ತಿ ಸಚಿವನಾಗಿ ಮುಂದುವರೆಯಲು ನಾಲಾಯಕ್. ಕತ್ತಿ ಪರವಾಗಿ ಯಡಿಯೂರಪ್ಪ ಅವರು ವಿಷಾದ ವ್ಯಕ್ತಪಡಿಸುವ ಬದಲು ಮಂತ್ರಿಮಂಡಲದಿಂದ ಕೈಬಿಡಬೇಕಿತ್ತು. ಇಂತಹ ಅಯೋಗ್ಯರನ್ನು ಇಟ್ಟುಕೊಂಡು ಸರ್ಕಾರ ಬಡವರ ಪರವಾಗಿ ಕೆಲಸ ಮಾಡಲು ಆಗುತ್ತಾ? ತಕ್ಷಣ ಸಚಿವ ಉಮೇಶ್ ಕತ್ತಿ ರಾಜೀನಾಮೆ ಪಡೆಯಬೇಕು ಎಂದು ಮುಖ್ಯಮಂತ್ರಿ ಅವರನ್ನು ಆಗ್ರಹಿಸುತ್ತೇನೆ.

ಲಾಕ್‌ಡೌನ್ ನಿಂದಾಗಿ ಜನ ಕೆಲಸ ಇಲ್ಲದೆ ಮನೆಯಲ್ಲಿ ಕೂತಿದ್ದಾರೆ, ಅಗತ್ಯ ವಸ್ತುಗಳನ್ನು ಕೊಳ್ಳಲು ಅವರ ಬಳಿ ಹಣವಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಪ್ರತೀ ವ್ಯಕ್ತಿಗೆ ತಲಾ ಹತ್ತು ಕೆ.ಜಿ ಅಕ್ಕಿ ಸೇರಿದಂತೆ ಅಗತ್ಯ ದಿನಸಿ ವಸ್ತುಗಳನ್ನು ತಕ್ಷಣ ವಿತರಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

Comments are closed.