ಉಡುಪಿ: ಮಣಿಪಾಲದಲ್ಲಿನ ಎಂಐಟಿ ಕ್ಯಾಂಪಸ್ಸಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ಯಾಂಪಸ್ ಒಳಗಡೆ ಇರುವ 5000 ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಹಾಗೂ ಕೋವಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ಈ ಬಗ್ಗೆ ಗುರುವಾರ ವಿಡಿಯೋ ಸಂದೇಶ ನೀಡಿರುವ ಅವರು, ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಪಾಸಿಟಿವ್ ಪ್ರಕರಣ ದಿಡೀರ್ ಏರಿಕೆಯಾಗಿದ್ದು, ಈ ಪೈಕಿ ಎಂಐಟಿ ಮಣಿಪಾಲ ಕ್ಯಾಂಪಸ್ ಒಂದರಲ್ಲೇ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಇದಕ್ಕಾಗಿ ಈಗಾಗಲೇ ಎಂಐಟಿಕೆ ಮಣಿಪಾಲದ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯೊಂದಿಗೆ ಸಭೆ ಸೇರಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಣಿಪಾಲ ಕ್ಯಾಂಪಸ್ ನಲ್ಲಿ ಸುಮಾರು 5000ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಈಗಾಗಲೇ ಇವರಿಗೆ ಕ್ಯಾಂಪಸ್ ಬಿಟ್ಟು ಹೊರಬರದಂತೆ ಸೂಚಿಸಲಾಗಿದ್ದು ಆ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಮಾತ್ರವಲ್ಲದೆ ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ನೇರ ತರಗತಿ , ಹಾಗೂ ಪರೀಕ್ಷೆಗಳು ಸ್ಥಗಿತಗೊಳಿಸಲು ಸೂಚಿಸಲಾಗಿದ್ದು, ಆನ್ ಲೈನ್ ಕ್ಲಾಸ್ ಮುಂದುವರಿಸುವಂತೆ ಸೂಚಿಸಲಾಗಿದೆ. ಈ ಕ್ಯಾಂಪಸ್ ಗೆ ಸೋಂಕು ತಗುಲಿದರೆ ಮುಂದೆ ವೇಗವಾಗಿ ಹರಡುವ ಸಾಧ್ಯತೆ ಇದೆ. ನಿನ್ನೆ ಏಕಾಏಕಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ವಿದ್ಯಾರ್ಥಿಗಳು ಮಣಿಪಾಲ ಸುತ್ತಮುತ್ತ ಓಡಾಡಿರಬಹುದಾಗಿದ್ದು ಮಣಿಪಾಲದ ಜನತೆ ಹಾಗೂ ಸುತ್ತಮುತ್ತದ ವ್ಯಾಪಾರಸ್ಥರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
Comments are closed.