ಉಡುಪಿ: ತನ್ನ ಮನೆ ಸಮೀಪದ ವಿವಾಹಿತ ಮಹಿಳೆಯ ಮನೆಗೆ ಯುವಕನೊಬ್ಬ ಬರುತ್ತಿರುವುದನ್ನು ಪ್ರಶ್ನಿಸಿದ ಕಾರಣಕ್ಕೆ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಫೆ.14ರಂದು ರಾತ್ರಿ ವೇಳೆ ಬ್ರಹ್ಮಾವರದ ಹೊಸೂರು ಗ್ರಾಮದಲ್ಲಿ ನಡೆದಿತ್ತು.

ಹೊಸುರು ಉದ್ದಳ್ಕ ನಿವಾಸಿ ನವೀನ್ ನಾಯ್ಕ ಅಲಿಯಾಸ್ ಗುಂಡ(43) ಕೊಲೆಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಡುಪಿ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಲ್ಪೆಯ ನಿವಾಸಿಗಳಾದ ಗೌತಮ್(27), ಮನೋಜ್ ಭಂಡಾರಿ(30), ಧನುಷ್(27), ಚೇತನ್ ಕುಮಾರ್(24), ತಿಲಕರಾಜ್(36), ಕದಿಕೆಯ ಸಿದ್ದಾರ್ಥ(23) ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ ಮಾರುತಿ ರಿಟ್ಜ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೊಲೆ ಪ್ರಕರಣ ಬೇಧಿಸಲು ಉಡುಪಿ ಎಸ್ಪಿ ವಿಷ್ಣುವರ್ಧನ್ ಮತ್ತು ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಂತೆ ಡಿವೈಎಸ್ಪಿ ಸದಾನಂದ ಎಸ್. ನಾಯ್ಕ್ ನಿರ್ದೇಶನದಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಬ್ರಹ್ಮಾವರ ಪಿಎಸ್ಐ ಗುರುನಾಥ ಬಿ. ಹಾದಿಮನಿ, ಮಲ್ಪೆ ಪಿಎಸ್ಐ ತಿಮ್ಮೇಶ ನೇತೃತ್ವದಲ್ಲಿ ತನಿಖಾ ತಂಡಗಳನ್ನು ರಚಿಸಲಾಗಿತ್ತು.
ಈ ಬಗ್ಗೆ ಕಾರ್ಯಾಚರಣೆ ನಡೆಸಿದ ತಂಡವು ಕೃತ್ಯ ಎಸಗಿದ 24 ಗಂಟೆಯೊಳಗೆ ಎಲ್ಲ ಆರೋಪಿಗಳನ್ನು ಫೆ.15ರಂದು ಉಡುಪಿಯಲ್ಲಿ ಬಂಧಿಸಿದೆ.
ನವೀನ್ ನಾಯ್ಕ ಮನೆಯ ಸಮೀಪದ ಮಹಿಳೆಯೊಬ್ಬರ ಮನೆಗೆ ಗೌತಮ್ ಬರುತ್ತಿರುವುದನ್ನು ಪ್ರಶ್ನಿಸಿದ್ದರು. ಇದೇ ದ್ವೇಷದಲ್ಲಿ ಗೌತಮ್ ಇತರರೊಂದಿಗೆ ಸೇರಿ ನವೀನ್ ನಾಯ್ಕನ ಮನೆಗೆ ಬಂದು ಕೊಲೆ ಮಾಡಿದ್ದಾನೆ ಎನ್ನುವುದು ತನಿಖೆ ವೇಳೆ ತಿಳಿದುಬಂದಿದೆ. ಬಡತನದಲ್ಲಿದ್ದ ನವೀನ್ ಕುಟುಂಬ ಅವರನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಕಾರ್ಯಾಚರಣೆಯ ತಂಡ..
ಬ್ರಹ್ಮಾವರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಗುರುನಾಥ ಬಿ ಹಾದಿಮನಿ, ಸಿಬ್ಬಂದಿಗಳಾದ ಆಶೋಕ ಮೆಂಡನ್, ಪ್ರವೀಣ್ ಶೆಟ್ಟಿಗಾರ್, ಗಣೇಶ ದೇವಾಡಿಗ, ರಾಘವೇಂದ್ರ, ಸಂತೋಷ ಶೆಟ್ಟಿ ಸಿ.ಪಿ.ಸಿ.ಗಳಾದ ದಿಲೀಪ್ ಕುಮಾರ, ಮಹಮ್ಮದ್ ಅಜ್ಮಲ್, ಅಬ್ದುಲ್ ಬಶೀರ್, ನಿಂಗಪ್ಪ, ದೇವರಾಜ, ರಾಜೇಶ ಮತ್ತು ಮಹಿಳಾ ಪಿಸಿ ದಿವ್ಯಾ ಹಾಗೂ ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ತಿಮ್ಮೇಶ ಬಿ.ಎನ್, ಹೆಚ್ಸಿ ರತ್ನಾಕರ ಶೆಟ್ಟಿ, ಸಿಪಿಸಿ ರವಿರಾಜ ಹಾಗೂ ಉಡುಪಿ ಪೊಲೀಸ್ ಉಪಾಧೀಕ್ಷಕರ ಕಚೇರಿ ಸಿಬ್ಬಂದಿಗಳಾದ ಎ.ಎಸ್.ಐ ಯೋಗೀಶ್ , ಸಿಪಿಸಿ ಕಿರಣ್ ಕುಮಾರ್ ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿದ್ದರು.
ಎಸ್ಪಿ ಶ್ಲಾಘನೆ…
ಘಟನೆ ನಡೆದ 24 ಗಂಟೆಯೊಳಗೆ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಉಡುಪಿ ವಿಭಾಗ ಹಾಗೂ ಬ್ರಹ್ಮಾವರ ವೃತ್ತದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಶ್ಲಾಘಿಸಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.