ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೊರ್ಗಿ ಎಂಬಲ್ಲಿ ಮೇಯಲು ಬಿಟ್ಟ ಮೂರು ಜಾನುವಾರುಗಳನ್ನು ಕದ್ದ ನಾಲ್ವರು ಗೋ ಕಳ್ಳರನ್ನು ಕುಂದಾಪುರ ಗ್ರಾಮಾಂತರ ಠಾಣೆ (ಕಂಡ್ಲೂರು) ಪೊಲೀಸರು 7-8 ದಿನದಲ್ಲೇ ಬಂಧಿಸಿದ್ದಾರೆ. ಶಂಕರ ಕುಲಾಲ್,ಅಶ್ಪಕ್ ಸಿರಾಜ್, ಸೈನಿ ಎನ್ನುವರು ಬಂಧಿತ ಗೋಕಳ್ಳರು. ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬೈಂದೂರು ಸಮೀಪ ಚೆಕ್ ಪೋಸ್ಟ್ ಬಳಿ ಭಾನುವಾರ ಬೆಳಿಗ್ಗೆನ ಸುಮಾರಿಗೆ ಬಂಧಿಸಿದ್ದಾರೆ.

ಕುಂದಾಪುರದ ಕೊರ್ಗಿಯಲ್ಲಿ ಮೂರು ಜಾನುವಾರು ಕಳವು ಮಾಡಿದ ಬಗ್ಗೆ ಜ.22 ರಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊರ್ಗಿಯ ಶರತ್ ಶೆಟ್ಟಿ ಎಂಬವರ ಮನೆಯ ದನಗಳನ್ನು ಮೇಯಲು ಬಿಟ್ಟ ಸಂದರ್ಭ ಕದ್ದಿದ್ದರು. ಕಳವಾದ ದನಗಳಲ್ಲಿ ಎರಡು ಗಬ್ಬದ ಹಸುಗಳು ಸೇರಿ ಒಟ್ಟು ಮೂರು ಜಾನುವಾರುಗಳಿತ್ತು.
ನ್ಯಾಯ ಒದಗಿಸುವಂತೆ ಜಾನುವಾರು ಕಳೆದುಕೊಂಡ ಮನೆಯ ಮಹಿಳೆ ಗಿರಿಜಾ ಶೆಟ್ಟಿ ಮನವಿ ಕೂಡ ಮಾಡಿದ್ದರು. ಮಾತ್ರವಲ್ಲ ಗೋಕಳ್ಳರನ್ನು ಮಟ್ಟ ಹಾಕಲು ಕುಂದಾಪುರ ಬಿಜೆಪಿ ಯುವಮೋರ್ಚಾ ಆಗ್ರಹ ಕೂಡ ಮಾಡಿತ್ತು. ವಾರದೊಳಗೆ ಆರೋಪಿಗಳನ್ನು ಬಂಧಿಸಿ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡದಿದ್ದರೆ ಕುಂದಾಪುರ ಡಿವೈಎಸ್ಪಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಗಿತ್ತು. ಎರಡು ದಿನದ ಹಿಂದೆ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ, ಬಿಜೆಪಿ ಯುವಮೋರ್ಚಾ ಕುಂದಾಪುರ ಅಧ್ಯಕ್ಷ ಅವಿನಾಶ್ ಉಳ್ತೂರು ನೇತೃತ್ವದಲ್ಲಿ ಬಿಜೆಪಿ ನಿಯೋಗ ಡಿವೈಎಸ್ಪಿ ಶ್ರೀಕಾಂತ್ ಅವರನ್ನು ಭೇಟಿಯಾಗಿ ಆರೋಪಿಗಳನ್ನು ಬಂಧಿಸಲು ಮನವಿ ಕೂಡ ನೀಡಿದ್ದರು.

(ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ರಾಜಕುಮಾರ್, ಸುಧಾ ಪ್ರಭು)

ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ…
ಕಾಯ್ದೆ ಜಾರಿಯಾದ್ರೂ ಗೋಕಳ್ಳರಿಗೆ ಭಯ ಇಲ್ಲವೇ ಎನ್ನುವ ಪ್ರಶ್ನೆಗಳು ಜನರಲ್ಲಿ ಮೂಡಿತ್ತು. ಈ ಬಗ್ಗೆ ಬಿಜೆಪಿ ಯುವಮೋರ್ಚಾ ಪ್ರತಿಭಟನೆಯ ಸಿದ್ಧತೆ ಕೂಡ ಮಾಡಿಕೊಂಡಿತ್ತು. ಆದರೆ ಪ್ರಕರಣ ದಾಖಲಾದ 7-8 ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ರಾಜಕುಮಾರ್, ಕ್ರೈಮ್ ವಿಭಾಗದ ಪಿಎಸ್ಐ ಸುಧಾ ಪ್ರಭು ನೇತೃತ್ವದ ತಂಡ ಯಶಸ್ವಿಯಾಗಿದೆ. ಶೀಘ್ರ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯತತ್ಪರತೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಮಾರ್ಗದರ್ಶನದಲ್ಲಿ ಪಿಎಸ್ಐ ರಾಜಕುಮಾರ್, ಸುಧಾಪ್ರಭು, ಸಿಬ್ಬಂದಿಗಳಾದ ಸತೀಶ್, ಮಧು, ನಾಗೇಶ್, ರಮೇಶ್, ಅನಿಲ್, ಚಿದಾನಂದ, ಶ್ರೀಕಾಂತ್, ಆನಂದ್ ಮೊದಲಾದವರು ಈ ಕಾರ್ಯಾಚರಣೆಯಲ್ಲಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.