
ಕಠ್ಮಂಡು:ನೇಪಾಳ ಕಮ್ಯುನಿಸ್ಟ್ ಪಕ್ಷದಿಂದ (ಎನ್‌ಸಿಪಿ) ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರನ್ನು ಉಚ್ಚಾಟಿಸಲಾಗಿದೆ. ಪಕ್ಷದ ಭಿನ್ನಮತೀಯ ಗುಂಪು ಭಾನುವಾರ ಕೇಂದ್ರೀಯ ಸಮಿತಿ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದೆ.
“ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ” ಎಂದು ಗುಂಪಿನ ವಕ್ತಾರ ನಾರಾಯಣ್ ಕಾಜಿ ಶ್ರೇಷ್ಠ ಖಚಿತಪಡಿಸಿದ್ದಾರೆ
ನೇಪಾಳದ ಸಂಸತ್ತಿನ ವಿಸರ್ಜನೆಯ ನಂತರದ ರಾಜಕೀಯ ಬಿಕ್ಕಟ್ಟು ಉಲ್ಬಣವಾಗುತ್ತಿದ್ದು ಕಮ್ಯುನಿಸ್ಟ್ ಪಕ್ಷದ ಭಿನ್ನಮತೀಯರ ಬಣವು ಈ ಹಿಂದೆ ಸಂಸತ್ತನ್ನು ವಿಸರ್ಜಿಸಿ ಹೊಸ ಚುನಾವಣೆಗೆ ಆದೇಶ ನೀಡುವ ನಿರ್ಧಾರಕ್ಕೆ ವಿರುದ್ಧವಾಗಿ ಬೀದಿಗಿಳಿದು ಪ್ರತಿಭಟಿಸಿದ್ದು ಓಲಿಯನ್ನು ಪಕ್ಷದಿಂದ ಹೊರಹಾಕುವ ಬೆದರಿಕೆ ಹಾಕಿತ್ತು.
ಇದಕ್ಕೆ ಮುನ್ನ ಪ್ರಧಾನ ಮಂತ್ರಿಯ ನಿರ್ದೇಶನದ ಮೇರೆಗೆ ಕಳೆದ ವರ್ಷ ಡಿಸೆಂಬರ್ 20 ರಂದು ಸಂಸತ್ತನ್ನು ವಿಸರ್ಜಿಸಲಾಯಿತು ಮತ್ತು ಏಪ್ರಿಲ್ 30 ಮತ್ತು ಮೇ 10ರಂದು ಚುನಾವಣೆಗಳನ್ನು ಘೋಷಿಸಲಾಯಿತು.
ಮೂರು ವರ್ಷಗಳ ಹಿಂದೆ ನೇಪಾಳ ಕಮ್ಯುನಿಸ್ಟ್ ಪಕ್ಷವು ಚುನಾವಣೆಯಲ್ಲಿ ಗೆದ್ದ ನಂತರ ಓಲಿ ಪ್ರಧಾನಿಯಾಗಿ ಅಧಿಕಾರಕ್ಕೇರಿದ್ದರು. . ಒಲಿಯ ಪಕ್ಷ ಮತ್ತು ಮಾಜಿ ಮಾವೋವಾದಿ ಬಂಡುಕೋರರ ಪಕ್ಷವು ಈ ಹಿಂದೆ ವಿಲೀನಗೊಂಡು ಏಕೀಕೃತ ಕಮ್ಯುನಿಸ್ಟ್ ಪಕ್ಷವನ್ನು ರಚಿಸಿತ್ತು. ಆದಾಗ್ಯೂ, ಓಲಿ ಮತ್ತು ಮಾಜಿ ಬಂಡುಕೋರರ ನಾಯಕ ಪುಷ್ಪ ಕಮಲ್ ದಹಲ್ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿದೆ. ಅವರು ಪಕ್ಷದ ಉಪಾಧ್ಯಕ್ಷರಾಗಿದ್ದಾರೆ. ಐದು ವರ್ಷಗಳ ಪ್ರಧಾನ ಮಂತ್ರಿಯ ಅವಧಿಯನ್ನು ತಮ್ಮ ನಡುವೆ ಹಂಚಿಕೊಳ್ಳುವುದಾಗಿ ಇಬ್ಬರೂ ಈ ಹಿಂದೆ ಒಪ್ಪಿಕೊಂಡಿದ್ದರು, ಆದರೆ ಒಲಿ ಇದೀಗ ಆ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷಗಳು ಒಲಿಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪವನ್ನೂ ಮಾಡಿವೆ, ಮತ್ತು ಕೊರೋನಾವೈರಸ್ ಸಾಂಕ್ರಾಮಿಕದ ನಿರ್ವಹಣೆ ಸಂಬಂಧ ಸಹ ಟೀಕೆಗಳು ಕೇಳಿಬಂದಿದೆ. ಒಲಿ ಅಧಿಕಾರ ವಹಿಸಿಕೊಂಡಾಗಿನಿಂದ ನೇಪಾಳವು ಚೀನಾಕ್ಕೆ ಹತ್ತಿರವಾಗುತ್ತಿದ್ದು ಸಾಂಪ್ರದಾಯಿಕ ಮಿತ್ರ ಭಾರತದಿಂದ ದೂರ ಸರಿಯುತ್ತಿದೆ ಎಂಬ ಆರೋಪವೂ ಅವರ ಮೇಲಿದೆ.
Comments are closed.