ಕುಂದಾಪುರ: ನಾಳೆ (ಜ.19) ಆನೆಗುಡ್ಡೆ ಶ್ರೀ ವಿನಾಯಕ ದೇವಳಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ಭೇಟಿ ನೀಡಲಿದ್ದು ಈ ಹಿನ್ನೆಲೆ ಬಿಗು ಬಂದೋಬಸ್ತ್ ಏರ್ಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಂಗಳವಾರ ನಡೆಯಲಿರುವ 1008 ಕಾಯಿ ಗಣಹೋಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಸಿಎಂ ಸ್ನೇಹಿತರಾದ ಬೀಜಾಡಿಯ ರಾಘವೇಂದ್ರ ರಾವ್ ಹಾಸನ ಅವರ ಗಣಹೋಮ ಹರಕೆ ಇದಾಗಿದ್ದು ಲೋಕಕಲ್ಯಾಣಾರ್ಥವಾಗಿ ಗಣಹೋಮ ಸಲ್ಲಿಸುತ್ತಿದ್ದಾರೆ. ಈ ಗಣಹೋಮದಲ್ಲಿ ಭಾಗಿಯಾಗಲು ಆಗಮಿಸುತ್ತಿರುವ ಸಿಎಂ ಬಿ.ಎಸ್ ಯಡಿಯೂರಪ್ಪ ಕುಟುಂಬಿಕರ ಜೊತೆ ದೇವಸ್ಥಾನಕ್ಕೆ ಆಗಮಿಸುವ ಸಾಧ್ಯತೆಯಿದೆ. ಇನ್ನು 2016 ಜನವರಿ 17 ರಂದು ಕೂಡ ರಾಘವೇಂದ್ರ ರಾವ್ ಅವರ ಹರಕೆ ಸಮರ್ಪಣಾ ಕಾರ್ಯಕ್ರಮಕ್ಕೆ ಬಿಎಸ್ ಯಡಿಯೂರಪ್ಪ ಕುಟುಂಬ ಸಮೇತರಾಗಿ ಆಗಮಿಸಿದ್ದರು. ಮುಖ್ಯಮಂತ್ರಿಯಾಗಿ ಆನೆಗುಡ್ಡೆಗೆ ಬರುವ ಮೊದಲ ಭೇಟಿ ಇದಾಗಿದ್ದು ಮೂರನೇ ಬಾರಿ ಅವರು ಕ್ಷೇತ್ರಕ್ಕೆ ಬರುತ್ತಿದ್ದಾರೆ.

ಸಿಎಂ ಭೇಟಿ ಹಿನ್ನೆಲೆ ಆನೆಗುಡ್ಡೆ ದೇವಸ್ಥಾನಕ್ಕೆ ಬಿಗು ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ.ಝಡ್ ಫ್ಲಸ್ ಭದ್ರತೆ ಹಿನ್ನೆಲೆ ಭಕ್ತರಿಗೆ ಆ ಸಮಯ ದೇವಸ್ಥಾನ ಭೇಟಿಗೆ ಅವಕಾಶವಿಲ್ಲ. ಬೆಳಿಗ್ಗೆ 10 ಗಂಟೆಯ ತರುವಾಯ ಮಧ್ಯಾಹ್ನದವರೆಗೆ ಭಕ್ತರ ಭೇಟಿಗೆ ಹಾಗೂ ಸೇವೆಗೆ ಅಡಚಣೆಯಾಗಲಿದ್ದು ಭಕ್ತರು ಸಹಕರಿಸುವಂತೆ ದೇವಸ್ಥಾನ ಆಡಳಿತ ಮಂಡಳಿ ಕೋರಿದೆ.
ಈಗಾಗಾಲೇ ದೇವಸ್ಥಾನಕ್ಕೆ ಭೇಟಿ ನೀಡಿ ಭದ್ರತೆಯನ್ನು ಅಧಿಕಾರಿಗಳು ಪರಿಶೀಲಿಸಿದ್ದು ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಉಡುಪಿ ಎಸ್ಪಿ ವಿಷ್ಣುವರ್ಧನ್ ನೇತೃತ್ವದಲ್ಲಿ ಕುಂದಾಪುರ ಪ್ರಭಾರ ಡಿವೈಎಸ್ಪಿ ಭರತ್ ರೆಡ್ಡಿ ಮಾರ್ಗದರ್ಶನದಲ್ಲಿ ಕುಂದಾಪುರ ಸಿಪಿಐ ಹಾಗೂ ಪಿಎಸ್ಐ ಸೇರಿದಂತೆ 170ಕ್ಕೂ ಅಧಿಕ ಪೊಲೀಸರು ಹಾಗೂ ಗೃಹರಕ್ಷಕ ಸಿಬ್ಬಂದಿಗಳು ಬಂದೋಬಸ್ತ್ ಕರ್ತವ್ಯದಲ್ಲಿರಲಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.