ಕರಾವಳಿ

ಹನಿಟ್ರಾಪ್ : ಬ್ಲ್ಯಾಕ್‌ಮೈಲ್ ಮಾಡಿ ಹಣ ದೋಚಲು ಯತ್ನ -ಇಬ್ಬರು ಯುವತಿಯರ ಸಹಿತಾ ನಾಲ್ವರ ಬಂಧನ

Pinterest LinkedIn Tumblr

ಮಂಗಳೂರು, ಜನವರಿ18: ಮಂಗಳೂರಿನಲ್ಲಿ ನಡೆದ ಹನಿಟ್ರಾಪ್ ಪ್ರಕರಣವನ್ನು ಬೇಧಿಸಿರುವ ಸುರತ್ಕಲ್ ಪೊಲೀಸರು ಇಬ್ಬರು ಯುವತಿಯರ ಸಹಿತಾ ಹನಿಟ್ರಾಪ್ ಜಾಲ ಪ್ರಮುಖ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ರೇಶ್ಮಾ ಯಾನೆ ನೀಮಾ (32), ಇಕ್ಲಾಬ್ ಮುಹಮ್ಮದ್ ಯಾನೆ ಇಕ್ಬಾಲ್(35), ಝೀನ್ ಯಾನೆ ಝೀನತ್ ಮುಬೀನ್(28), ನಾಸಿಫ್ ಯಾನೆ ಅಬ್ದುಲ್ ಖಾದರ್ ನಾಝಿಫ್(34) ಎಂದು ಗುರುತಿಸಲಾಗಿದೆ.

ಆರೋಪಿಗಳು ಮಂಗಳೂರಿನಲ್ಲಿ ವಾಸ್ತವ್ಯ ಹೊಂದಿರುವ ಕೇರಳ ಮೂಲದ ಯುವಕನನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿ ಮನೆಗೆ ಆಹ್ವಾನಿಸಿ ಬ್ಲಾಕ್‌ಮೇಲ್ ಮಾಡಿ ಹಣ ದೋಚಲು ಯತ್ನಿಸಿದ್ದರು. ಈ ಬಗ್ಗೆ ಯುವಕ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಸುರತ್ಕಲ್ ಪೋಲಿಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.. ಬಂಧಿತ ಆರೋಪಿಗಳಿಂದ ಮೊಬೈಲ್ ಫೋನ್, ನಗದು ಹಣ, ಕೃತ್ಯಕ್ಕೆ ಉಪಯೋಗಿಸಿದ ಆಯುಧ ಹಾಗೂ ವಾಹನವನ್ನು ವಶಪಡಿಸಿರುತ್ತಾರೆ.

ಕಮಿಷನರ್ ಶಶಿಕುಮಾರ್ ಅವರ ನಿರ್ದೇಶನದಲ್ಲಿ ಹಾಗೂ ಉಪ ಮೊಲೀಸ್ ಆಯುಕ್ತರಾದ ಹರಿರಾಮ್ ಶಂಕರ್ ಐ.ಪಿ.ಎಸ್ (ಕಾ&ಸು) ಮತ್ತು ಉಪ ಪೊಲೀಸ್ ಆಯುಕ್ತರಾದ ಶ್ರೀ ವಿನಯ್ ಗಾಂವ್ಕರ್ (ಅಪರಾಧ & ಸಂಚಾರ) ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಹಾಯಕ ಮೊಲೀಸ್ ಆಯುಕ್ತರು, ಉತ್ತರ ಉಪವಿಭಾಗ ಶ್ರೀ ಬೆಳ್ಯಪ್ಪ ಮತ್ತು ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಚಂದ್ರಪ್ಪ ಕೆ, ಮತ್ತು ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ಮೂಲತಃ ಕೇರಳ ಮೂಲದವರನ್ನು ಬಂಧಿತ ಆರೋಪಿಗಳ ಪೈಕಿ ರೇಶ್ಮಾ ಮತ್ತು ಝೀನತ್ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿ ಅವರನ್ನು ಒಬ್ಬಂಟಿಯಾಗಿರುವುದಾಗಿ ನಂಬಿಸಿ ಮನೆಗೆ ಆಹ್ವಾನಿಸುತ್ತಿದ್ದರು.

ಮನೆಗೆ ಬಂದವರನ್ನು ಇಕ್ಬಾಲ್ ಹಾಗೂ ಅಬ್ದುಲ್ ಖಾದರ್ ನಾಸಿಫ್ ಸಹಾಯದಿಂದ ಬೆದರಿಸಿ ಹಲ್ಲೆ ನಡೆಸಿ ಬ್ಲಾಕ್ ಮೇಲ್ ಮಾಡಿ ಅವರಿಂದ ಹಣ ವಸೂಲು ಮಾಡುತ್ತಿದ್ದರು. ಇನ್ನೂ ನಾಲ್ಕೈದು ಆರೋಪಿಗಳು ಈ ಜಾಲದಲ್ಲಿರುವ ಅನುಮಾನವಿದೆ ಎಂದು ತಿಳಿಸಿದರು.

ಹನಿಟ್ರ್ಯಾಪ್ ಗೆ ಒಳಗಾದ ಓರ್ವ ಸಂತ್ರಸ್ತನಿಂದ ಮಾಹಿತಿ ದೊರಕಿದ್ದು, ಇನ್ನೂ ಐದಾರು ಮಂದಿ ಇವರ ಬ್ಲಾಕ್‌ಮೇಲ್ ತಂತ್ರಕ್ಕೆ ಒಳಗಾಗಿರುವುದು ತಿಳಿದುಬಂದಿದೆ. ಮಾರ್ಯಾದೆಗೆ ಅಂಜಿ ಹೆಚ್ಚಿನವರು ದೂರು ನೀಡಲು ಮುಂದಾಗುವುದಿಲ್ಲ. ಇದನ್ನೇ ಆರೋಪಿಗಳು ಬಂಡವಾಳವಾಗಿಸಿ ಮತ್ತಷ್ಟು ಜನರನ್ನು ತಮ್ಮ ಬಲೆಗೆ ಬೀಳಿಸಲು ಪ್ರಯತ್ನಿಸುತ್ತಾರೆ.

ಆದ್ದರಿಂದ ಈ ರೀತಿ ಹನಿಟ್ರ್ಯಾಪ್‌ಗೆ ಒಳಾಗದವರು ಅಂಜಿಕೆ ಇಲ್ಲದೆ ಪೊಲೀಸರಿಗೆ ಮಾಹಿತಿಯನ್ನು ಗೌಪ್ಯವಾಗಿ ನೀಡುವ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿ ಇನ್ನಷ್ಟು ಅಮಾಯಕರು ಇಂತಹ ಆರೋಪಿಗಳ ಕೃತ್ಯಕ್ಕೆ ಬಲಿಯಾಗುವುದನ್ನು ತಡೆಯಬಹುದು ಎಂದು ಕಮಿಷನರ್ ಶಶಿಕುಮಾರ್ ಸಾರ್ವಜನಿಕರಿಗೆ ಮನವಿ ಮಾಡಿದರು.

ಆರೋಪಿ ಜೀನತ್ ಹಾಗೂ ಅವರ ಗಂಡ ಆರೋಪಿ ಇಕ್ವಾಲ್ ರವರು ಕಾನ-ಕಟ್ಟಾ ಪರಿಸರದ ಫ್ಲೋರೆಂಟೈನ್ ಅಪಾರ್ಟೈಂಟ್ಸ್ ನಲ್ಲಿ ವಾಸ್ತವ್ಯ ಇದ್ದು ಆರೋಪಿ ಶ್ರೀ ನಾಸಿಫ್ ಸೂರಿಂಜೆ ಮೂಲದವನಾಗಿದ್ದು ಪ್ರಸ್ತುತ ಚೊಕ್ಕಬೆಟ್ಟು ಪರಿಸರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡಿಕೊಂಡಿರುತ್ತಾರೆ.

ಇವರು ಈ ಹಿಂದೆಯು ಕೂಡ ಮಂಗಳೂರು ಮತ್ತು ಆರೋಪಿಗಳ ಸ್ವಂತ ನಿವಾಸದಲ್ಲಿ ಕೇರಳ ಮೂಲದವರನ್ನು ಕರೆಸಿ ಇದೇ ರೀತಿಯ ಕೃತ್ಯ ಮಾಡಿಕೊಂಡು ಸುಮಾರು ಐದಾರು ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿರುತ್ತದೆ ಮತ್ತು ಇವರ ಹಿಂದೆ ಇನ್ನಷ್ಟು ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಶಂಕೆಯಿದೆ ಎಂದು ಅಯುಕ್ತರು ತಿಳಿಸಿದರು.

ಡಿಸಿಪಿ ಹರಿರಾಂ ಶಂಕರ್, ಉಪ ಪೊಲೀಸ್ ಆಯುಕ್ತ ವಿನಯ್ ಗಾಂವ್ಕರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.