ಉಡುಪಿ: ಉಡುಪಿ ಜಿಲ್ಲೆಯ ಪ್ರಸಿದ್ಧ ಕ್ಷೇತ್ರವಾದ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಸನ್ನಿಧಿಯಲ್ಲಿ ಕೋವಿಡ್ ನಿಯಮಾವಳಿಯಂತೆ ಸಂಕ್ರಮಣ ಉತ್ಸವ ನಡೆಯಿತು. ಸೇವಂತಿಗೆ ಪ್ರಿಯನಾದ ಬ್ರಹ್ಮಲಿಂಗೇಶ್ವರನಿಗೆ ಸಾವಿರಾರು ಭಕ್ತರು ಆಗಮಿಸಿ ಹಣ್ಣು ಹೂ ಕಾಯಿ ಅರ್ಪಿಸಿದರು.

ಕೋವಿಡ್ 19 ಹಿನ್ನೆಲೆಯಲ್ಲಿ ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕ ಆಚರಣೆಗೆ ಒತ್ತು ನೀಡಲಾಗಿದ್ದು, ಗುರುವಾರ ರಾತ್ರಿ ನಡೆಯುವ ಗೆಂಡಸೇವೆಗೆ ಭಕ್ತರಿಗೆ ಅವಕಾಶವಿಲ್ಲ. ಕೋವಿಡ್ ನಿಯಮಾವಳಿಯಂತೆ ಇತರ ಕೆಲವು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಭಕ್ತರ ಸಂಖ್ಯೆಯಲ್ಲಿ ಇಳಿಕೆ :
ಮಾರಣಕಟ್ಟೆಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಭಕ್ತರು ಊರು – ಪರವೂರಿನಿಂದ ಆಗಮಿಸುತ್ತಾರೆ. ಕೋವಿಡ್ 19 ಹಿನ್ನೆಲೆಯಲ್ಲಿ ಇಷ್ಟು ವರ್ಷಕ್ಕೆ ಹೋಲಿಸಿದರೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಸಾಮಾಜಿಕ ಅಂತರದೊಂದಿಗೆ ನಡೆದ ಅನ್ನ ಸಂತರ್ಪಣೆ ನಡೆಯಿತು. ತುಳುನಾಡಿನ ಅಸಂಕ್ಯ ಭಕ್ತ ಸಮುದಾಯವನ್ನು ಹೊಂದಿರುವ ದೇವಸ್ಥಾನ ಊರ ಮತ್ತು ಪರವೂರ ಅಪಾರ ಭಕ್ತಸಾಗರವನ್ನು ಹೊಂದಿದೆ. ಕ್ಷೇತ್ರದಲ್ಲಿ ಪ್ರತಿನಿತ್ಯ ವಿಶೇಷ ಪೂಜೆಗಳು ನಡೆಯುತ್ತದೆ.ರಂಗಪೂಜೆ, ಮಂಗಳಾರತಿ ಇಲ್ಲಿ ನಡೆಯುವ ವಿಶೇಷ ಪೂಜಾ ಕೈಂಕರ್ಯಗಳು. ಬ್ರಹ್ಮಲಿಂಗೇಶ್ವರ ದೇವರಿಗೆ ಪ್ರಿಯವಾದ ಸೇವಂತಿಗೆ ಮತ್ತು ಶೃಂಗಾರ ಪುಷ್ಪವನ್ನು ಹಬ್ಬದ ದಿನ ಸಾವಿರಾರು ಭಕ್ತರು ಅರ್ಪಿಸಿ ಹರಕೆ ತೀರಿಸಿದರು. ಈ ಸಂಪ್ರದಾಯಕ್ಕೆ ಹೂಕಾಯಿ ಆರ್ಪಿಸುವುದು ಎನ್ನಲಾಗುತ್ತದೆ. ಪ್ರಸಿದ್ಧವಾದ ಮಾರಣಕಟ್ಟೆ ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹರಕೆ ಹಾಗೂ ಪೂಜೆಗಳನ್ನು ಸಲ್ಲಿಸುವ ಸಂಪ್ರದಾಯವಿದ್ದು ಜಾತ್ರಾ ಮಹೋತ್ಸವವಾದ ಗುರುವಾರ ಬೆಳಿಗ್ಗೆಯಿಂದಲೇ ಸಹಸ್ರಾರು ಭಕ್ತರು ಹಣ್ಣು ಕಾಯಿಗಳನ್ನು ತಲೆ ಮೇಲೆ ಇಟ್ಟುಕೊಂಡು ದೇವರ ದರ್ಶನ ಪಡೆದು ಪೂಜೆಯನ್ನು ಸಲ್ಲಿಸುತ್ತಿದ್ದಾರೆ.
ತುಳು ನಾಡಿನ ಭಕ್ತರಿಗೆ ಬ್ರಹ್ಮಲಿಂಗೇಶ್ವರ ದೇವರ ಬಗ್ಗೆ ಅಪಾರ ಭಯ ಭಕ್ತಿ ಇದ್ದು ಪ್ರತಿವರ್ಷ ಸಂಕ್ರಮಣದಂದು ಜರಗುವ ಈ ಜಾತ್ರೆಗೆ ಆಗಮಿಸಿ ಪೂಜೆ ಸಲ್ಲಿಸುವುದು ವಾಡಿಕೆ. ಕ್ಷೇತ್ರದಲ್ಲಿ ಬ್ರಹ್ಮಲಿಂಗೇಶ್ವರನು ಪ್ರಧಾನ ದೇವರಾಗಿದ್ದು ಹುಲಿದೆವರು,ಹಾಯ್ಗುಳಿ,ಮರ್ಲ್ ಚಿಕ್ಕು ಮುಂತಾದ ಪರಿವಾರ ದೈವಗಳು ಇಲ್ಲಿ ನೆಲೆಸಿದೆ. ಮಾರಣಕಟ್ಟೆ ಶ್ರೀ ಕ್ಷೇತ್ರವು ಕುಂದಾಪುರದಿಂದ ಕೊಲ್ಲೂರಿಗೆ ಸಾಗುವ ಹೆದ್ದಾರಿಯಲ್ಲಿ ಸಿಗುವ ಚಿತ್ತೂರು ಎಂಬ ಗ್ರಾಮದಿಂದ ಕಾಲ್ನಡಿಗೆಯ ದೂರದಲ್ಲಿ ಸಿಗುತ್ತದೆ. ಕುಂದಾಪುರ, ಉಡುಪಿ, ಮಂಗಳೂರು, ಕಾರ್ಕಳ ಹಾಗೂ ಮಲೆನಾಡು ಭಾಗದಿಂದ ಭಕ್ತರು ಆಗಮಿಸುತ್ತಿದ್ದು ದೇವಸ್ಥಾನದ ವತಿಯಿಂದ ಕೊರೋನಾ ಹಿನ್ನೆಲೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಿ.ಸದಾಶಿವ ಶೆಟ್ಟಿ, ವ್ಯವಸ್ಥಾಪಕ ರಘುರಾಮ ಶೆಟ್ಟಿ, ಕೊಲ್ಲೂರು ದೇವಸ್ಥಾನದ ಧರ್ಮದರ್ಶಿ ವಂಡಬಳ್ಳಿ ಜಯರಾಮ್ ಶೆಟ್ಟಿ, ಹೈದರಬಾದ್ ಉದ್ಯಮಿ ಕೃಷ್ಣಮೂರ್ತಿ ಮಂಜ ಈ ಬಾರಿ ಬೆಳಿಗ್ಗೆ ನಡೆದ ಮಹಾ ಮಂಗಳಾರತಿ ಪೂಜೆಯಲ್ಲಿ ಪಾಲ್ಘೊಂಡರು.
(ಚಿತ್ರ, ವರದಿ- ಯೋಗೀಶ್ ಕುಂಭಾಸಿ)
Comments are closed.